ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election)ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್ಗಳು ಘೋಷಣೆ ಮಾಡಿ ಕೊಂಡಿದ್ದರು. ಆದರೆ, ಯಾವುದೇ ಹೋಟೆಲ್ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಕೇಂದ್ರ ಚುನಾವಣಾ ಆಯೋಗದಿಂದ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರ್ಜರಿ ಮತದಾನ ಜಾಗೃತಿ ಮೂಡಿಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಾಥ್ ನೀಡಲು ಹೋಟೆಲ್ ಮಾಲೀಕರ ಸಂಘವೂ ನಿರ್ಧರಿಸಿತ್ತು. ಬೆಂಗಳೂರಿನ ನಿಸರ್ಗ ಹೋಟೆಲ್ ಸೇರಿದಂತೆ ಹಲವು ಹೋಟೆಲ್ಗಳಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ ಹಾಗೂ ಊಟ ಕೊಡುವುದಾಗಿ ಘೋಷಣೆ ಮಾಡಿ ಸಿದ್ಧತೆಯನ್ನೂ ಮಾಡಿಕೊಂಡಿದ್ದವು. ಆದರೆ, ಕೊನೇ ಕ್ಷಣದಲ್ಲಿ ಬಿಬಿಎಂಪಿ ಯಾವುದೇ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಉಚಿತ ಊಟ, ತಿಂಡಿ ನೀಡದಂತೆ ನಿಷೇಧ ಜಾರಿಗೊಳಿಸಿ ಆದೇಶಿಸಿದೆ.
ಹೋಟೆಲ್ ಮಾಲೀಕರ ಮೇಲೆ ಕಾನೂನು ಕ್ರಮ: ರಾಜ್ಯದಲ್ಲಿ ಈಗಾಗಲೇ ಮಾ.29ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಆದರೆ, ಈಗಾಗಲೇ ಕೆಲವು ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೆಲವು ಹೋಟೆಲ್ಗಳ ಮುಂದೆ ಮತದಾನ ಮಾಡಿ ಬಂದವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ,
ತಿಂಡಿ ನೀಡಲಾಗುವುದು ಎಂದು ಫಲಕ ಮತ್ತು ಪೋಸ್ಟರ್ ಅಳವಡಿಕೆ ಮಾಡಿರುವುದು ಕಂಡುಬಂದಿದೆ. ಆದರೆ, ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಲಿದ್ದು, (Considered as Inducement and violation of MCC) ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿದಂತೆ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಉಚಿತ ಊಟ, ತಿಂಡಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.