ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿ ಬಯಸಿದೆ. ಆದ್ದರಿಂದ ಜಾರಿ ನಿರ್ದೇಶನಾಲಯ ಸಮನ್ಸ್ ಕೊಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ನನ್ನನ್ನು ಬಂಧಿಸುವ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಹೊಸ ಮದ್ಯನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಜಾರಿ ನಿರ್ದೇಶನಾಲಯದ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ನೀಡಿತ್ತು. ಮೂರನೇ ಸಮನ್ಸ್ ಬಳಿಕವೂ ವಿಚಾರಣೆಗೆ ಗೈರಾದ ಬಳಿಕ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಮದ್ಯನೀತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.
ಬಿಜೆಪಿ ನನ್ನನ್ನು ಬಂಧಿಸಲು ಬಯಸುತ್ತದೆ. ನನ್ನ ದೊಡ್ಡ ಆಸ್ತಿ ನನ್ನ ಪ್ರಾಮಾಣಿಕತೆ ಮತ್ತು ಅವರು ಅದನ್ನು ನಾಶಮಾಡಲು ಬಯಸುತ್ತಾರೆ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ನನಗೆ ಸಮನ್ಸ್ ಕಳುಹಿಸಿರುವುದು ಕಾನೂನುಬಾಹಿರ ಎಂದು ನನ್ನ ವಕೀಲರು ಹೇಳಿದ್ದಾರೆ. ಬಿಜೆಪಿಯ ಉದ್ದೇಶ ನನ್ನ ತನಿಖೆಯಲ್ಲ, ಆದರೆ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಬಿಡುವುದಿಲ್ಲ. ಅವರು ತನಿಖೆಯ ನೆಪದಲ್ಲಿ ನನ್ನನ್ನು ಕರೆದು ನಂತರ ನನ್ನನ್ನು ಬಂಧಿಸಲು ಬಯಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.