ಲಖನೌ: ಗಲಭೆ ರಾಜ್ಯ ಎಂಬ ಕಳಂಕವನ್ನು ನಾವು ಹೋಗಲಾಡಿಸಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 2017ರ ಮೊದಲು ಯುಪಿ ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ದಿನಕ್ಕೊಂದು ಗಲಾಟೆ ನಡೆಯುತ್ತಿತ್ತು. 2012ರಿಂದ 17ರ ನಡುವೆ 700ಕ್ಕೂ ಹೆಚ್ಚು ಗಲಭೆಗಳು ನಡೆದಿವೆ. 2017ರ ನಂತರ ಗಲಭೆಗಳಿಗೆ ಅವಕಾಶವೇ ಇಲ್ಲ. ಈ ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು.
ಆದರೆ ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ. ಇಂದು ಯಾವುದೇ ಅಪರಾಧಿಗಳು ಉದ್ಯಮಿಗೆ ಬೆದರಿಕೆ ಹಾಕುವ ಸಾಹಸ ಮಾಡುತ್ತಿಲ್ಲ. ಉತ್ತರ ಪ್ರದೇಶ ಸರ್ಕಾರವು ನಿಮ್ಮ ಎಲ್ಲಾ ಹೂಡಿಕೆದಾರರ ಬಂಡವಾಳವನ್ನು ಸುರಕ್ಷಿತವಾಗಿಡಲು ಸಮರ್ಥವಾಗಿದೆ ಎಂದರು. ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಮತ್ತು ಅಪೆರಲ್ (ಪಿಎಂ ಮಿತ್ರ) ಯೋಜನೆಯಡಿ ಲಖನೌ-ಹರ್ದೋಯ್ನಲ್ಲಿ,
ಒಂದು ಸಾವಿರ ಎಕರೆ ವಿಶಾಲವಾದ ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಎಂಒಯು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ, ಈ ಹಿಂದೆ ಎಲ್ಲಿ ಕತ್ತಲು ಶುರುವಾಗುತ್ತದೆಯೋ ಅಲ್ಲಿಂದ ಉತ್ತರ ಪ್ರದೇಶ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿತ್ತು. 75 ಜಿಲ್ಲೆಗಳ ಪೈಕಿ 71 ಜಿಲ್ಲೆಗಳು ಕತ್ತಲೆಯಲ್ಲಿದ್ದವು. ಇಂದು ಅದು ಮಾಯವಾಗಿದೆ. ಇಂದು ಉತ್ತರ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಬೀದಿ ದೀಪಗಳು ಬೆಳಗುತ್ತಿವೆ ಎಂದರು.