ನವದೆಹಲಿ: ಮುಂಬೈನ ವಾಂಖೆಡೆ (Mumbai Wankhede Stadium) ಮತ್ತು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಬಳಸುವುದನ್ನು ಬಿಸಿಸಿಐ (BCCI) ನಿಷೇಧಿಸಿದೆ. ಬಾಂಬೆ ಹೈಕೋರ್ಟ್ ಮುಂಬೈನ (Mumbai) ವಾಯು ಗುಣಮಟ್ಟವನ್ನು (Air Quality) ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದ ಬಳಿಕ ಬಿಸಿಸಿಐ (BCCI) ಈ ನಿರ್ಧಾರ ಪ್ರಕಟಿಸಿದೆ.
ಮುಂಬೈ ಮತ್ತು ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ.
ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ ಎಂದು ಜಯ್ ಶಾ ತಿಳಿಸಿದ್ದಾರೆ. ಮುಂಬೈ ಮತ್ತು ನವದೆಹಲಿ ಎರಡೂ ಕಡೆ ಗಾಳಿಯ ಗುಣಮಟ್ಟದ ಬಗೆಗೆ ಬಿಸಿಸಿಐ ಕಾಳಜಿ ವ್ಯಕ್ತಪಡಿಸಿದೆ. ಕ್ರಿಕೆಟ್ನ ಸಂಭ್ರಮಾಚರಣೆಗೆ ಸೂಕ್ತವಾದ ರೀತಿಯಲ್ಲಿ ಐಸಿಸಿ ವಿಶ್ವಕಪ್ (ICC World) ಆಯೋಜಿಸಲು ನಾವು ಶ್ರಮಿಸುತ್ತೇವೆ. ಹಾಗೆಯೇ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.