ಗದಗ: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಇಂತಹ ಸರ್ಕಾರದ ಪಡೆದಿರುವುದು ಕರ್ನಾಟಕದ ದೌರ್ಭಾಗ್ಯ, ಆದರೆ, ಈ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದರು.
ಇನ್ನೂ ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚಟವಟಿಕೆ ನಡೆಯುತ್ತಿದೆ. ವಿಶೇಷವಾಗಿ ಹಿರಿಯ ಸಚಿವರು ದೆಹಲಿ ಭೇಟಿ ಮಾಡುವುದು ನೋಡಿದರೆ ಗೊತ್ತಾಗುತ್ತದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಸತತ, ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಯಾವುದೇ ಕೆಲಸಕ್ಕೆ ಭೇಟಿಯಾಗಿರಬಹುದು. ನಮ್ಮ ಹೈಕಮಾಂಡ್ ಬಹಳ ಸ್ಪಷ್ಟವಾಗಿದೆ. ಈ ಸರ್ಕಾರ ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು.