ಇಂಧನ ಇಲಾಖೆಯ ಸಾಫ್ಟ್ ವೇರ್ ವ್ಯವಸ್ಥೆ ಉನ್ನತೀಕರಣ ಪ್ರಯುಕ್ತ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಆನ್ ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆಗಳು ಪುನಾರಂಭಗೊಂಡಿವೆ. ಇದರಿಂದ ಬಿಲ್ ಕಟ್ಟಲು ಸಾಕಷ್ಟು ದಿನದಿಂದ ಪರದಾಡಿದ್ದ ಜನತೆ ಇದೀಗ ನಿರಾಳರಾಗಿದ್ದಾರೆ. ಅಲ್ಲದೆ ಲೇಟ್ ಆಗಿ ಬಿಲ್ ಕಡ್ತಿರೋದ್ರಿಂದ ಯಾವುದೇ ದಂಟ ಕೂಡ ಕಟ್ಟಬೇಕಾಗಿಲ್ಲ.
ಈ ಬಗ್ಗೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಎಲ್ಲಾ 5 ಎಸ್ಕಾಂಗಳ ನಗರ ಪ್ರದೇಶಗಳ ಸ್ಥಗಿತಗೊಂಡಿದ್ದ ಆನ್ ಲೈನ್ ವಿದ್ಯುತ್ ಸೇವೆಗಳು ಇದೀಗ ಪುನಾರಂಭಗೊಂಡಿದ್ದು, ಈ ತಿಂಗಳ 30ರೊಳಗೆ ಎಲ್ಲಾ ಆನ್ ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ತಿಳಿಸಿದೆ.
ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ಬಡ್ಡಿ ವಿಧಿಸುವುದಿಲ್ಲ ಹಾಗೂ ಈ ಸಂದರ್ಭದಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆನ್ ಲೈನ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಿರಲಿಲ್ಲ.
ಮಾರ್ಚ್ 20ರಂದು ಆನ್ ಲೈನ್ ಸೇವೆಗಳನ್ನು ಪುನಾರಂಭಗೊಳಿಸಲಾಗಿತ್ತು, ಆದರೆ ಕಳೆದ 10 ದಿನಗಳ ಕಾಲ ಸೇವೆ ಸ್ಥಗಿತಗೊಂಡಿದ್ದ ಕಾರಣ, ಎಲ್ಲಾ ಗ್ರಾಹಕರು ಕಳೆದ ಎರಡು ದಿನಗಳಿಂದ ಒಂದೇ ಬಾರಿ ವಿದ್ಯುತ್ ಬಿಲ್ ಪಾವತಿಸಲು ಎಸ್ಕಾಂಗಳ ಕೌಂಟರುಗಳಿಗೆ ದೌಡಾಯಿಸಿದ್ದರಿಂದ ಸರ್ವ ಓವರ್ಲೋಡ್ ಆಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು, ಇದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಮಾರ್ಚ್ 30ರೊಳಗೆ ಆನ್ ಲೈನ್ ವಿದ್ಯುತ್ ಸೇವೆಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ಹಹಿಸಲಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಈ ಸೇವಾ ಸ್ಥಗಿತ ಅವಧಿಯಲ್ಲಿ ಬಿಲ್ ಪಾವತಿಸಲು ಅಥವಾ ಇತರ ವಿದ್ಯುತ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಸಾಧ್ಯವಾಗಿಲ್ಲ, ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ತಿ, ವಿಧಿಸದಿರಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಅದು ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ವಿದ್ಯುತ್ ಇಲಾಖೆ ಗ್ರಾಹಕರಿಗೆ ಮಾಹಿತಿ ನೀಡಿದೆ.