ಬಾಗಲಕೋಟೆ: ರಾಜ್ಯದುದ್ದಕ್ಕೂ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಸಾರ್ವಜನಿಕ ಸಭೆಯಲ್ಲಿ ಜನಾಶೀರ್ವಾದ ದುಪ್ಪಟ್ಟಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯಲ್ಲಿ ಮಾತನಾಡಿದ ಅವರು ಮೋದಿ ಹಾಗು ಅಮಿತ್ ಶಾರವರ ಮಾರ್ಗದರ್ಶನದಿಂದ ಗುರಿ ಮುಟ್ಟುವಲ್ಲಿ ಕಾರಣವಾಗಲಿದೆ. ಈಗಾಗಲೇ 50 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮುಗಿಸಿದ್ದು, ಈ ಭಾರಿ ಜನ ಬೆಂಬಲ ಸಾಕಷ್ಟು ದೊರೆತಿದೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ನಾಯಕತ್ವವಿಲ್ಲ
ರಾಹುಲ್ ಗಾಂಧಿಯವರನ್ನು ನಾನೂ ಟೀಕೆ ಮಾಡಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾರಿ ಅವರಿಗೆ ಸರಿಸಮಾನರಲ್ಲವೆಂದು ಹೇಳುತ್ತೇನೆ. ಈಗಾಗಲೇ ಡಿ.ಕೆ. ಶಿವಕುಮಾರ್ ಹಾಗು ಸಿದ್ದರಾಮಯ್ಯನವರು ಸಿಎಂ ಗಾದೆಯ ಹುಮ್ಮಸ್ಸಿನಲ್ಲಿದ್ದಾರೆ. ಅದು ಸ್ವಾಭಾವಿಕ ಆದರೆ ಇವರಿಬ್ಬರ ಕನಸು ನನಸಾಗುವುದಿಲ್ಲವೆಂದು ಹೇಳಿದರು.
ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಸಮುದಾಯಕ್ಕೆ ನೀಡಿದ ಸೌಲಭ್ಯಗಳು ತುಂಬ ಸಹಕಾರಿಯಾಗಿವೆ ಎಂದರು.
ಸಿದ್ದು ಸವದಿಗೆ ಜೈ ಎಂದ ಬಿಎಸ್ವೈ
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೈದು ವರ್ಷಗಳಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುವಲ್ಲಿ ಹಾಲಿ ಶಾಸಕ ಸಿದ್ದು ಸವದಿ ಯಶಸ್ವಿಯಾಗಿದ್ದಾರೆ. ಈ ಬಾರಿಯೂ ಸಿದ್ದು ಸವದಿಯವರಿಗೇ ಟಿಕೆಟ್ ದೊರಕಲಿದೆ ಎಂದು ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದರು.
ಪುತ್ರ ವಿಜಯೇಂದ್ರರಿಗೆ ಟಿಕೆಟ್ ದೊರಕಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ. ರವಿಯವರ ಹೇಳಿಕೆ ಸತ್ಯ. ನಮ್ಮ ಮನೆಯಲ್ಲಿಯೇ ಟಿಕೆಟ್ ದೊರಕದು, ಚುನಾವಣಾ ಸಮಿತಿಯ ನಿರ್ಧಾರವೇ ಅಂತಿಮ. ಟಿಕೆಟ್ ನೀಡುವಂತೆ ನನ್ನ ಸಲಹೆ ಇದ್ದೇ ಇದೆ ಎಂದರು.
ಸಿಎಂ ಸ್ಥಾನಕ್ಕೆ ಸ್ವಯಂ ರಾಜಿನಾಮೆ ನೀಡಿದ್ದೇನೆ
ವಿಪಕ್ಷಗಳು ನನ್ನನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಹೇಳುತ್ತಿದೆ. ಅವರಿಗೇನು ಗೊತ್ತು?. ಮುಖ್ಯಮಂತ್ರಿ ಸ್ಥಾನದಿಂದ ನಾನೇ ಸ್ವಯಂ ರಾಜಿನಾಮೆ ನೀಡಿದ್ದೇನೆ ವಿನಃ ಯಾರ ಒತ್ತಡವೂ ಇರಲಿಲ್ಲ. ಈಚೆಗೆ ಅಧಿವೇಶನದಲ್ಲಿಯೂ ಸ್ಪಷ್ಟವಾಗಿ ತಿಳಿಸಿದ್ದು, ಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲವೆಂದೂ ತಿಳಿಸಿದ್ದೇನೆ.
ಈಗಾಗಲೇ 80 ವರ್ಷಗಳಾಗಿವೆ. ರಾಜಕೀಯದ ಎಲ್ಲ ಮಜಲುಗಳನ್ನೂ ಕಂಡಿದ್ಧೇನೆ. ಬೇರೆಯವರಿಗೆ ಅವಕಾಶ ದೊರಕಬೇಕೆಂಬ ಉದ್ದೇಶದಿಂದಲೇ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿಯಾಗಲು ನಾನೇ ಸಹಕರಿಸಿದ್ದೇನೆಂದು ಸ್ಪಷ್ಟನೆ ನೀಡಿದರು.
ಸಚಿವ ಮುರಗೇಶ್ ನಿರಾಣಿ, ಅರುಣ್ ಶಹಾಪುರ, ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ