ನವದೆಹಲಿ:- ಯಾರೇ ಸತ್ತರೂ ಕಾಂಗ್ರೆಸ್ ಲೂಟಿ ಮಾಡೋದನ್ನು ಬಿಡೋದಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ.
ಪಿತ್ರಾರ್ಜಿತ ತೆರಿಗೆ ಕುರಿತು ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನ ಈ ಉದ್ದೇಶ ಒಳ್ಳೆಯದಲ್ಲ ಎಂದಿರುವ ಮೋದಿ, ಈಗ ಅವರ ಅಪಾಯಕಾರಿ ಉದ್ದೇಶಗಳು ಎಲ್ಲರ ಮುಂದೆ ಬಹಿರಂಗವಾಗಿ ಹೊರಬಂದಿವೆ. ಹಾಗಾಗಿ ಈಗ ಪಿತ್ರಾರ್ಜಿತ ತೆರಿಗೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಸಂಪಾದನೆ, ನಿಮ್ಮ ಮನೆ, ಅಂಗಡಿ, ಹೊಲ, ಗದ್ದೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ಆರೋಪಿಸಿರುವ ಪ್ರಧಾನಿ ಮೋದಿ, ದೇಶದ ಪ್ರತಿಯೊಂದು ಮನೆ, ಪ್ರತಿ ಬೀರು ಮತ್ತು ಪ್ರತಿಯೊಂದು ಕುಟುಂಬದ ಆಸ್ತಿಯನ್ನು ಎಕ್ಸ್-ರೇ ಮಾಡುತ್ತೇನೆ ಎಂದು ಕಾಂಗ್ರೆಸ್ ರಾಜಕುಮಾರ ಹೇಳುತ್ತಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಬಳಿ ಇರುವ ಚಿಕ್ಕ ಸ್ತ್ರಿಧಾನವೆಂದರೆ ಚಿನ್ನಾಭರಣಗಳು. ಕಾಂಗ್ರೆಸ್ ಅವರನ್ನೂ ತನಿಖೆಗೆ ಒಳಪಡಿಸುತ್ತದೆ. ತಾಯಿ ಮತ್ತು ಸಹೋದರಿಯರ ಮಂಗಳಸೂತ್ರವನ್ನೂ ಕಿತ್ತುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ತಂದೆ ತಾಯಿಯ ಆಸ್ತಿಯನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ, ಪಿತ್ರಾರ್ಜಿತ ತೆರಿಗೆ ವಿಧಿಸುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಮಕ್ಕಳು ಪಡೆಯಬೇಕೆಂದು ಅವರು ಬಯಸುವುದಿಲ್ಲ. ಭಾರತೀಯರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಕಾಂಗ್ರೆಸ್ ಬಯಸುವುದಿಲ್ಲ. ಈ ಪಕ್ಷ ನಗರ ನಕ್ಸಲರ ಹಿಡಿತದಲ್ಲಿದೆ. ಅವರು ನಿಮ್ಮ ಎಲ್ಲಾ ಅಂಗಡಿಗಳು ಮತ್ತು ಮನೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು.
ಕಾಂಗ್ರೆಸ್ಗೆ ಒಂದೇ ಮಂತ್ರವಿದೆ ಎಂದಿರುವ ಪ್ರಧಾನಿ ಮೋದಿ, ನೀವು ಬದುಕಿದ್ದಾಗಲೂ, ನಿಮ್ಮ ಜೀವನ ಮುಗಿದ ನಂತರವೂ ಕಾಂಗ್ರೆಸ್ ನಿಮ್ಮನ್ನು ಲೂಟಿ ಮಾಡುತ್ತದೆ. ನೀವು ಬದುಕಿರುವವರೆಗೆ, ಕಾಂಗ್ರೆಸ್ ನಿಮಗೆ ಹೆಚ್ಚಿನ ತೆರಿಗೆಗಳನ್ನು ವಿಧಿಸುತ್ತದೆ. ನಿಮ್ಮ ಜೀವನ ಮುಗಿದ ನಂತರ ನಿಮಗೆ ಪಿತ್ರಾರ್ಜಿತ ತೆರಿಗೆಯಿಂದ ಹೊರೆ ಹಾಕುತ್ತದೆ. ಇದನ್ನೆಲ್ಲಾ ಕಿತ್ತುಕೊಂಡು ಕಾಂಗ್ರೆಸ್ ಯಾರಿಗೆ ಕೊಡುತ್ತೆ ಗೊತ್ತಾ ಎಂದ ಮೋದಿ, ನಿಮ್ಮಿಂದ ಲೂಟಿ ಮಾಡಿ ಯಾರಿಗೆ ಕೊಡ್ತಾರೆ ಗೊತ್ತಾ? ನಾನು ಹೇಳುವ ಅಗತ್ಯವಿಲ್ಲ. ಆದರೆ ಈ ಪಾಪವನ್ನು ಮಾಡಲು ನೀವು ಅನುಮತಿ ಕೊಡಬೇಡಿ, ಅವರ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್ಗೆ ತಿಳಿದಿಲ್ಲ. ದೇಶದ ಜನರು ಅವರಿಗೆ ಈ ಅವಕಾಶವನ್ನು ನೀಡುವುದಿಲ್ಲ ಎಂದರು.