ಹುಬ್ಬಳ್ಳಿ: ನಾಗಪುರದಿಂದ ಯಾರೇ ಬಂದರೂ ಅವರಿಂದ ಯಶಸ್ವಿ ಚುನಾವಣೆ ಮಾಡಲು ಆಗುವುದಿಲ್ಲ. ಸ್ಥಳೀಯವಾಗಿ ನಮಗೆ ಗುರುತಿರುತ್ತೆ, ಹೊರಗಿನಿಂದ ಬಂದವರಿಗೆ ಎಲ್ಲಾ ಮಾಹಿತಿ ಇರುವುದಿಲ್ಲ. ತಿಳಿದುಕೊಳ್ಳುವಷ್ಟರಲ್ಲಿ ಚುನಾವಣೆ ಮುಗಿದಿರುತ್ತೆ, ಅನುಭವದಲ್ಲಿ ಇದನ್ನೆಲ್ಲಾ ನೋಡಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಾಗಪುರದಿಂದ ನೂರಾರು ಜನರ ತಂಡ ಬಂದಿದೆ ಅಂತಾ ಹೇಳ್ತಾರೆ, ಆದರೆ ನಾನು ನೋಡಿಲ್ಲ. ಅಕಸ್ಮಾತ್ ಬಂದಿದ್ರೆ ನಾನೊಂದು ಹೇಳುತ್ತೇನೆ. ಇತ್ತೀಚೆಗೆ ನಾಗಪುರದಲ್ಲಿ ಪದವೀಧರರ ಕ್ಷೇತ್ರದ ಚುನಾವಣೆ ನಡೆಯಿತು, ಇಷ್ಟೆಲ್ಲಾ ಎಕ್ಸ್ಪರ್ಟ್ ಇರುವವರು ನಾಗಪುರದ ಪದವೀಧರರ ಚುನಾವಣೆಯಲ್ಲಿ ಯಾಕೆ ಸೋತರು ತಿಳಿಸಲಿ ಎಂದ ಅವರು, ನಾನು ಕಾನೂನುಬಾಹಿರ ಕೆಲಸ ಮಾಡಲ್ಲ, ನನ್ನ ಚಲನವಲನದ ಮೇಲೆ ಏನು ನಿಗಾ ಇಡುತ್ತಾರೆ ಎಂದು ಪ್ರಶ್ನಿಸಿದರು.
ಲಿಂಗಾಯತರಿಗೆ ಈ ಬಾರಿ ಹೆಚ್ಚು ಟಿಕೆಟ್ ಕೊಡಲಾಗಿದೆ. ಕಾಂಗ್ರೆಸ್ (Congress) ಬಂಡಾಯ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಜೊತೆ ನಾನು ಮಾತಾಡುತ್ತೇನೆ. ಕಾಂಗ್ರೆಸ್ ವರಿಷ್ಠರು ಈಗಾಗಲೇ ಅವರ ಜೊತೆ ಮಾತಾಡಿದ್ದಾರೆ, ಎಲ್ಲಾ ಸರಿ ಹೋಗುತ್ತದೆ. ಹುಬ್ಬಳ್ಳಿ – ಧಾರವಾಡ ಕೇಂದ್ರ ಕ್ಷೇತ್ರದ ಜನ ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ ಪಾರ್ಟಿ ನನ್ನ ಜೊತೆ ಶಕ್ತಿಯಾಗಿ ನಿಂತಿದೆ. ಜನರ ಆಶೀರ್ವಾದ ನನ್ನ ಜೊತೆ ಇರುವವರೆಗೆ ಯಾರೂ ನನ್ನನ್ನು ಸೋಲಿಸಲು ಆಗುವುದಿಲ್ಲ. ಯಾರೇ ನನ್ನನ್ನು ಟಾರ್ಗೆಟ್ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ತಿರುಗೇಟು ನೀಡಿದರು. ನಾನು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ, ಜನರ ವಿಶ್ವಾಸ ನನ್ನ ಜೊತೆಗಿದೆ. ಹೀಗಾಗಿ ನಾನು ಗೆದ್ದು ಬರುತ್ತೇನೆ. ಲಿಂಗಾಯತರ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದಾರೆ? ನನಗೆ ಗೊತ್ತಿಲ್ಲ.ನೋಡದ ವಿಷಯಗಳ ಬಗ್ಗೆ ನಾನು ಕಾಮೆಂಟ್ ಮಾಡಲ್ಲ ಎಂದು ತಿಳಿಸಿದರು.