ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಹಣಕಾಸು ಸಚಿವಾಲಯದಲ್ಲಿ ಹಣವಿಲ್ಲ ಎಂದು ಅಲ್ಲಿನ ರಕ್ಷಣಾ ಸಚಿವ ಆಸಿಫ್ ತಿಳಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಮರಿಯುಮ್ ಔರಂಗಜೇಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಿ ಮಾಧ್ಯಮಗಳನ್ನು ಉದ್ದೇಶಿಸಿ ಆಸಿಫ್ ಈ ವಿಷಯ ಬಹಿರಂಗಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಹತ್ಯೆ ಯತ್ನ ಆರೋಪ ಸುಳ್ಳು ಎಂದು ಖವಾಜಾ ಆಸಿಫ್ ಹೇಳಿದ್ದಾರೆ. “ಅವರು ಮೊದಲು ಮಾಜಿ ಸೇನಾ ಮುಖ್ಯಸ್ಥ ಜನರಲ್ ನಿವೃತ್ತ ಕಮರ್ ಜಾವೈದ್ ಬಾಜ್ವಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿದರು. ಈಗ ಅವರು ಅವರನ್ನು ದೂಷಿಸುತ್ತಿದ್ದಾರೆ. ಆರಂಭದಲ್ಲಿ ತನ್ನನ್ನು ಪದಚ್ಯುತಿ ಮಾಡಲು ಅಮೆರಿಕ ಕಾರಣವೆಂದಿದ್ದರು” ಎಂದು ರಕ್ಷಣಾ ಸಚಿವರು ಟೀಕಿಸಿದ್ದಾರೆ.
ಇಮ್ರಾನ್ ಖಾನ್ ಅಸಂವಿಧಾನಿಕವಾಗಿ ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಿದ್ದರು. ಅವಿಶ್ವಾಸ ಮತದ ಮೂಲಕ ಸಾಂವಿಧಾನಿಕವಾಗಿ ತಮ್ಮ ಸ್ಥಾನದಿಂದ ಹೊರಹಾಕಲ್ಪಟ್ಟರು. ಈಗ ಅವರು ಕೋರ್ಟ್ ಮುಂದೆ ಹಾಜರಾಗಲು ಬಯಸುತ್ತಿಲ್ಲ ಎಂದಿದ್ದಾರೆ.
ಇಮ್ರಾನ್ ಖಾನ್ ಅವರು ಪ್ರತಿದಿನ ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಆದರೆ, ಈ ಬಿಕ್ಕಟ್ಟನ್ನು ಬಗೆಹರಿಸಲು ಸರಕಾರ ಯತ್ನಿಸುತ್ತಿದ್ದು, ಪಾಕಿಸ್ತಾನವು ಶೀಘ್ರದಲ್ಲಿ ಈ ಬಿಕ್ಕಟ್ಟುಗಳಿಂದ ಹೊರಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.