ಬೆಳಗಾವಿ: ರಾಜ್ಯದ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದೆ(Karnataka Assembly Election 2023). ಇನ್ನು ಈ ದಿನ ಕಳೆದು ಬೆಳಗ್ಗೆಯೇ ಫಲಿತಾಂಶ ಹೊರಬೀಳಲಿದೆ. ಇದ್ರ ನಡುವೆ ಹೊರಬಿದ್ದಿರೋ ಮತದಾನೋತ್ತರ ಸಮೀಕ್ಷೆ, ರಾಜಕೀಯ ವಲಯದಲ್ಲಿ ಹಲ್ ಚಲ್ ಎಬ್ಬಿಸಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ಗೆ ಬಹುಮತ ಎಂದಿವೆ. ಇದು ಕಾಂಗ್ರೆಸ್ಗೆ ಮತ್ತಷ್ಟು ಹುರುಪು ಮೂಡುವಂತೆ ಮಾಡಿದ್ದು ಪಕ್ಷದೊಳಗೆ ಸಭೆ, ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ಗೆ ಸರಿಯಾದ ಬಹುಮತ ಸಿಗದೆ ಹೋದರೆ ಪಕ್ಷೇತರರನ್ನ ಕರೆತಂದು ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಬಿಜೆಪಿ ಕೂಡ ತಂತ್ರಗಾರಿಗೆ ಹೆಣೆಯುತ್ತಿದೆ. ಇದರ ನಡುವೆ ಕಿಂಗ್ ಮೇಕರ್ ಆಗುವ ಆಸೆಯಲ್ಲಿ ಜೆಡಿಎಸ್ ಮುಗುಳು ನಗೆ ಬೀರಿದೆ. ಹೆಚ್ಡಿ ಕುಮಾರಸ್ವಾಮಿ ನಾನು ಮೈತ್ರಿಗೆ ಸಿದ್ಧ ಎಂದಿದ್ದಾರೆ. ಇನ್ನು ಸಿ.ಎಂ. ಇಬ್ರಾಹಿಂ ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಲಿದೆ ಎಂದಿದ್ದಾರೆ.
ಸಮೀಕ್ಷೆಗಳ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ಸರ್ಕಾರ ರಚಿಸುವ ವಿಶ್ವಾಸವನ್ನು ಹೊರ ಹಾಕಿದ್ದಾರೆ. ರಾಷ್ಟ್ರೀಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ. ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡಿವೆ. ಜೆಡಿಎಸ್ ಪಕ್ಷ ಯಾವುದಕ್ಕೂ ಹಿಗ್ಗುವುದಿಲ್ಲ, ಕುಗ್ಗುವುದೂ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತೆ. ಈ ಚುನಾವಣೆ ದುಡ್ಡಿನಲ್ಲಿ ನಡೆದಿದೆ. ನಮ್ಮ ಅಭ್ಯರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ ಎಂದರು.