ಬೆಂಗಳೂರು: ಅಮುಲ್-ನಂದಿನಿ ವಿಲೀನದ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್ ಬಲಿಷ್ಠ, ಕೆಎಂಎಫ್ ಗೆ ಭದ್ರ ಬುನಾದಿಯಿದೆ.
ಯಾವುದೇ ಸ್ಪರ್ಧೆಯನ್ನು ಎದುರಿಸುವಂತಹ ಸಾಮರ್ಥ್ಯ ಹೊಂದಿದೆ. ಗುಜರಾತ್ ನ ಅಮುಲ್ ನಲ್ಲಿ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ.
ನಂದಿನಿ ಉತ್ಪನ್ನಗಳು ದೇಶ, ವಿದೇಶದಲ್ಲಿ ಮಾರಾಟವಾಗುತ್ತಿದೆ. ತಿರುಮಲ ಲಾಡಿಗೆ ನಂದಿನಿ ತುಪ್ಪ, ಗುಜರಾತ್ ಗೆ ತುಪ್ಪ, ಚೀಜ್ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು. ಚುನಾವಣಾ ರಾಜಕಾರಣಕ್ಕೆ ಜನರ ದಿಕ್ಕು ತಪ್ಪಿಸಲು ಹುನ್ನಾರ ಹೂಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾರುಕಟ್ಟೆ ವಿಸ್ತರಣೆಗೆ ಸಲಹೆ- ಸೂಚನೆ ನೀಡಿದ್ದಾರೆ.
ಬೇಸಿಗೆಯಲ್ಲಿ ಹಸಿ ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಕಡಿಮೆಯಾಗುವುದು ಸಹಜ. ಕೃತಕ ಅಭಾವ ಸೃಷ್ಟಿಸುವ ಪ್ರಮೇಯ ಉದ್ಭವಿಸದು ಎಂದರು. ಆನ್ ಲೈನ್ ನಲ್ಲಿ ವ್ಯಾಪಾರ ಹಾಲು, ಮೊಸರು ಮತ್ತದರ ಉತ್ಪನ್ನಗಳ ವಹಿವಾಟು ನಡೆಯುತ್ತದೆ. ಅಮುಲ್ ಹಾಲು ಲೀಟರ್ ಗೆ 57 ರೂ., ನಂದಿನಿ ಹಾಲಿಗೆ 39 ರೂ.ಗಳಿದೆ. ಯಾರಿಗೆ ಯಾವುದು ಬೇಕೋ ಅದನ್ನು ಖರೀದಿಸುತ್ತಾರೆ ಎಂದು ಸೋಮಶೇಖರ್ ಸಮಜಾಯಿಷಿ ನೀಡಿದರು.