ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದಾರೆ. ಶಿವರಾಜ್ ಕುಮಾರ್ ಪತ್ನಿಯ ಪರ ಪ್ರಚಾರ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು ಇತ್ತೀಚೆಗೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ಕುಮಾರ್ ಅವರ ಸಿನಿಮಾ, ಬಿಲ್ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು.
ರಘು ಮನವಿಗೆ ಚುನಾವಣಾ ಆಯೋಗ ಉತ್ತರಿಸಿದೆ. ‘ಚುನಾವಣೆಗೆ ಸ್ಪರ್ಧಿಸುವ ಅಥವಾ ಪ್ರಚಾರ ಮಾಡುವ ನಟರನ್ನು ಒಳಗೊಂಡ ಸಿನಿಮಾಗಳ ಪ್ರದರ್ಶನವನ್ನು ಸರ್ಕಾರದ ಹಣದಿಂದ ನಡೆಸಲ್ಪಡುವ ದೂರದರ್ಶನದಲ್ಲಿ ಮಾತ್ರ ನಾವು ನಿಷೇಧಿಸಬಹುದು. ಖಾಸಗಿ ಟಿವಿ ಚಾನೆಲ್ಗಳು ಮತ್ತು ಸಿನಿಮಾ ಥಿಯೇಟರ್ಗಳಲ್ಲಿ ವಾಣಿಜ್ಯ ಪ್ರದರ್ಶನಗಳನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.