ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯಲ್ಲಿ 2017 ರಿಂದ RTI ಘಟಕವೇ ಇಲ್ಲದಂತಾಗಿದ್ದು, ಅರ್ಜಿದಾರರು ಪರದಾಟುವಂತಾಗಿದೆ. ಬಿಬಿಎಂಪಿ 2017 ರಿಂದ ಆರ್ಟಿಐ ಘಟಕವನ್ನು ಮುಚ್ಚಿರುವುದರಿಂದ, ಅರ್ಜಿದಾರರು ಈಗ ತಮ್ಮ ಆರ್ಟಿಐ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಹುಡುಕುವ ಪ್ರಯಾಸಕರ ಕೆಲಸ ಮಾಡಬೇಕಿದೆ. ಮೊದಲು, ಅರ್ಜಿದಾರರು ತಮ್ಮ ವಿನಂತಿಗಳನ್ನು ‘ಪಿಐಒ,(PIO) ಬಿಬಿಎಂಪಿ’ಗೆ ತಿಳಿಸಬೇಕಾಗಿತ್ತು, ನಂತರ ಅದನ್ನು ಸಂಬಂಧಿಸಿದ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ರವಾನಿಸಲಾಗುತ್ತದೆ.
ಆದರೆ ಈಗ ಅರ್ಜಿದಾರರು ಬಿಬಿಎಂಪಿ ವೆಬ್ಸೈಟ್ನಿಂದ ಪಿಐಒಗಳ ಪಟ್ಟಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಯನ್ನು ಕಂಡುಹಿಡಿಯಬೇಕಾದ ಪರಿಸ್ಛಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಿಬಿಎಂಪಿ(BBMP) ವಿರುದ್ಧ ಕಿಡಿಕಾರಿರುವ ಆರ್ಟಿಐ (RTI)ಕಾರ್ಯಕರ್ತರ ವೇದಿಕೆಯಾದ ಕೆಆರ್ಐಎ ಕಟ್ಟೆಯ ರವೀಂದ್ರನಾಥ ಗುರು ಅವರು, ‘ಬಹುಶಃ ಬಿಬಿಎಂಪಿ ಅಧಿಕಾರಿಗಳು ಪಿಐಒ ಗಳನ್ನು ಹುಡುಕಲು ಜನರು ನಗರದಾದ್ಯಂತ ಪ್ರಯಾಣಿಸಬೇಕೆಂದು ಬಯಸುತ್ತಿದ್ದಾರೆ ಎಂದು ಅನಿಸುತ್ತಿದೆ. ಇದು ನಾಗರಿಕರ ಮಾಹಿತಿಯನ್ನು ನಿರಾಕರಿಸುವ ಬಿಬಿಎಂಪಿಯ ಕಾರ್ಯವಿಧಾನವಾಗಿದೆ ಎಂದು ಆರೋಪಿಸಿದ್ದಾರೆ.