ಮೈಸೂರು ;- ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಸಂಭವಿಸಿಸುತ್ತಿರುವ ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹೈವೇಯಲ್ಲಿ ಪ್ರತಿದಿನ ಅಪಘಾತಗಳಾಗುತ್ತಿವೆ. ಇದಕ್ಕೆ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಕಾರಣ ಎಂದು ಹೇಳಿದರೆ ಅಥವಾ ತೋರಿಸಿದರೆ ಎಂಜಿನಿಯರ್ಗಳನ್ನು ಕರೆದುಕೊಂಡು ಬಂದು ಸರಿಮಾಡುತ್ತೇನೆ. ಅದನ್ನು ಬಿಟ್ಟು ಬರೀ ಹೆದ್ದಾರಿ ಅವೈಜ್ಞಾನಿಕ ಎಂದು ಹೇಳಿದ್ರೆ ಒಪ್ಪಲು ನಾವು ಸಿದ್ದವಿಲ್ಲ. ಹೆದ್ದಾರಿಯಲ್ಲಿ ಅಪಘಾತವಾಗಲು ಚಾಲಕರ ಬೇಜವಾಬ್ದಾರಿಯುತ ಚಾಲನೆಯೇ ಕಾರಣ ಎಂದರು.
ಹೆದ್ದಾರಿಯಲ್ಲಿ ಯಾವುದೇ ಅವೈಜ್ಞಾನಿಕ ಕಾಮಗಾರಿಗಳು ನಡೆದಿಲ್ಲ. ಹೆದ್ದಾರಿಯಲ್ಲಿ ಗರಿಷ್ಠ ವೇಗ 120 ಕಿಲೋಮೀಟರ್ ಆಗಿದೆ. ಸಣ್ಣಪುಟ್ಟ ಕಾರುಗಳಲ್ಲಿ ವೇಗವಾಗಿ ಹೋದರೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದರು. ಯಾರಾದರೂ ಇಂಜಿನಿಯರ್ಗಳು ಈ ರಸ್ತೆ ಪ್ರಾಬ್ಲಮ್ ಇದೆ ಎಂದು ಹೇಳಲಿ. ಖಂಡಿತಾ ಅದನ್ನು ಸರಿಮಾಡುತ್ತೇವೆ. ಕೆಲವು ಅವಶ್ಯಕ ಸೌಲಭ್ಯ ಹಾಗೂ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿವೆ. ಶೀಘ್ರವೇ ಆ ಕೆಲಸ ಕೈಗೆತ್ತಿಕೊಳ್ಳುತ್ತೇವೆ. ಮಂಡ್ಯದಿಂದ ಮೈಸೂರಿನವರೆಗಿನ ಟೋಲ್ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಎಕ್ಸ್ಪ್ರೆಸ್ ಹೈವೇಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.