ಬೆಂಗಳೂರು:- ನೀರಿಲ್ಲ, ನೀರಿಲ್ಲ ಬೆಂಗಳೂರು ಮಂದಿಗೆ ನೀರಿಲ್ಲ,, ಇದು ಸಧ್ಯದ ಸಿಲಿಕಾನ್ ಸಿಟಿ ಜನರ ಸ್ಥಿತಿ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಾರಂಭಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ.
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಈಗಿನ ನೀರಿನ ಮಟ್ಟದ ಪ್ರಕಾರ ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು ಪೂರೈಕೆ ಮಾಡಬಹುದು ಎಂದು ಸಮಿತಿ ಹೇಳಿದೆ.
ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಕಬಿನಿಯಲ್ಲಿ ಕೇವಲ 2.10 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಬೆಂಗಳೂರಿಗೆ ಒಂದು ತಿಂಗಳು ಮಾತ್ರ ನೀರು ಸಿಗಬಹುದು ಎಂದು ಕಾವೇರಿ ನೀರಾವರಿ ತಾಂತ್ರಿಕ ಸಮಿತಿ ಹೇಳಿದೆ.
ಕೆಂಗೇರಿಯ ಹರ್ಷ ಲೇಔಟ್ ಜನ ನೀರಿಲ್ಲದೇ ಹರ್ಷ ಕಳೆದುಕೊಂಡಿದ್ದಾರೆ. ವಾರಕ್ಕೋ, ಹದಿನೈದು ದಿನಕ್ಕೋ ಬರೋ ನೀರಿಗೂ ಕಾದು ಸುಸ್ತಾಗಿದ್ದಾರೆ. ಹೀಗೆ ಕಂಗಾಲಾದ ಜನರಿಗೆ ಟ್ಯಾಂಕರ್ ಮಾಫಿಯ ಕೂಡ ಮತ್ತಷ್ಟು ಸಂಕಷ್ಟ ತಂದಿಟ್ಟಿದ್ದು, ಹೈರಾಣಾಗಿ ಹೋಗಿದ್ದಾರೆ.
ಕುಡಿಯಲು ಮತ್ತು ಕೃಷಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯ ಬರಿದಾಗುವ ಹಂತಕ್ಕೆ ಬಂದಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನರಿಗೆ ಜಲಸಂಕಷ್ಟ ಎದುರಾಗಿದೆ. 105.79 ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯದ ಡ್ಯಾಂನಲ್ಲಿ ಕೇವಲ 9.4 ಟಿಎಂಸಿ ನೀರು ಮಾತ್ರ ಉಳಿದ್ದು, ನಾಲ್ಕು ಜಿಲ್ಲೆಯ ಜನರ ಆತಂಕ ಹೆಚ್ಚಾಗಿದೆ.
ಮತ್ತೊಂದೆಡೆ, ದಕ್ಷಿಣದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸೃಷ್ಟಿಯಾಗದಿದ್ದರೂ ನೀರಿನ ಅಭಾವದ ಎಲ್ಲ ಮುನ್ಸೂಚನೆ ದೊರೆಯಲು ಆರಂಭವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಂಭಾವ್ಯ ಸಮಸ್ಯೆ ತಡೆಗಟ್ಟಲು ಹಾಗೂ ಪರಿಹಾರಕ್ಕಾಗಿ ಈಗಾಗಲೇ ಕ್ರಮ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಬರದ ಪರಿಣಾಮ ರಾಜ್ಯದ ಜಲಾಶಯಗಳು ಬತ್ತಿಹೋಗುತ್ತಿವೆ. ನೀರಿನ ಮೂಲಗಳು ತಳ ಹಿಡಿಯುತ್ತಿವೆ