ಇಸ್ಲಾಮಾಬಾದ್: ನ್ಯಾಯಾಧೀಶೆಯೊಬ್ಬರಿಗೆ ಬೆದರಿಕೆ ಒಡ್ಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕ್ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಇಮ್ರಾನ್ ಖಾನ್ ಕೋರ್ಟ್ಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ಹಾಗೂ ಮಾರ್ಚ್ 30 ರಂದು ಹಾಜರಾಗಲು ಅವಕಾಶ ನೀಡುವಂತೆ ಖಾನ್ ಪರ ವಕೀಲ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶ ಮಲಿಕ್ ಅಮನ್ ತಿರಸ್ಕರಿಸಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ನ್ಯಾಯಾಧೀಶ ಅಮನ್, ಏ. 18ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಖಾನ, , ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಝೆಬಾ ಚೌಧರಿ ಹಾಗೂ ಇಸ್ಲಾಮಾಬಾದ್ ಪೊಲೀಸ್ ಅಧಿಕಾರಿಗಳ ವಿರುದ್ಧ ಬೆದರಿಕೆ ಒಡ್ಡುವ ಭಾಷೆ ಬಳಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು.