ಇದೇ ವರ್ಷ ಭಾರತದ ಆತಿಥ್ಯಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗಿಂತಲೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾಟ್ಸನ್ ಎಂದು ಹೇಳಿದ್ದಾರೆ.
2023ರ ಸಾಲಿನ ಒಡಿಐ ವಿಶ್ವಕಪ್ ಟೂರ್ನಿಯು ಅಕ್ಟೋಬರ್-ನವೆಂಬರ್ ಆತಿಥ್ಯದಲ್ಲಿ ನಡೆಯಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಡಿಐ ವಿಶ್ವಕಪ್ ಟೂರ್ನಿಯು ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಟೂರ್ನಿ ಆರಂಭಕ್ಕೆ ಇನ್ನು 6 ತಿಂಗಳ ಸಮಯ ಬಾಕಿಯಿದ್ದು, ಈಗಾಗಗಲೇ ಎಲ್ಲ ತಂಡಗಳು ಈ ಮಹತ್ವದ ಟೂರ್ನಿ ಸಲುವಾಗಿ ಸಮರಾಭ್ಯಾಸ ಶುರು ಮಾಡಿಯಾಗಿದೆ.
ಅಂದಹಾಗೆ ಭಾರತ ತಂಡ ಈ ಬಾರಿ ತನ್ನ ಪ್ರಮುಖ ಆಟಗಾರರ ಸೇವೆಯನ್ನು ಈಗಾಗಗಲೇ ಕಳೆದುಕೊಂಡಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮುಂದಿನ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಅನುಮಾನ. ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದಿದ್ದ ಕನಿಷ್ಠ 6 ತಿಂಗಳು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡಿದ್ದು, ಕ್ರಿಕೆಟ್ಗೆ ಯಾವಾಗ ಕಮ್ಬ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.
ಟ್ರೋಫಿ ಗೆಲ್ಲದ ಭಾರತ ತಂಡ
2013ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಸಾರಥ್ಯದಲ್ಲಿ ಆಡಿದ ಭಾರತ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಇದಾದ ಬಳಿಕ ಹಲವು ಬಾರಿ ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಸೆಮಿಫೈನಲ್ಸ್ ಮತ್ತು ಫೈನಲ್ ತಲುಪಿದೆಯಾದರೂ ಯಶಸ್ಸು ಮಾತ್ರ ಕೈಹಿಡಿದಿಲ್ಲ. ಹೀಗಾಗಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ 2023ರ ವಿಶ್ವಕಪ್ ಗೆದ್ದೇ ತೀರುವ ಹಠದಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಭಾರತ ತಂಡಕ್ಕೆ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳಇಂದ ಭಾರಿ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಭಾರತ ತಂಡದ ಕನಸನ್ನು ನನಸನ್ನಾಗಿಸಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಹುಮುಖ್ಯ ಪಾತ್ರವಹಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿದೆ, ಆದರೆ 29 ವರ್ಷದ ಸ್ಟಾರ್ ಆಲ್ರೌಂಡರ್ ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಡಲಿದ್ದಾರೆ ಎಂದು ಶೇನ್ ವಾಟ್ಸನ್ ಅಭಿಪ್ರಾಯ ಪಟ್ಟಿದ್ದಾರೆ.