ಮಂಡ್ಯ: ಇಡೀ ಪ್ರಪಂಚದಲ್ಲಿ ಭಾರತ ಸರ್ಕಾರದ ಕೆಲಸ ಅವಿಸ್ಮರಣೀಯ. ಮೋದಿ (Narendra Modi) ನೇತೃತ್ವದಲ್ಲಿ ಭಾರತ ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು. ಶ್ರೀರಂಗಪಟ್ಟಣದ ಕೊತ್ತತ್ತಿ ಗ್ರಾಮದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅನೇಕ ವರ್ಷಗಳ ಕಾಲ ಕಾಂಗ್ರೆಸ್ (Congress) ಆಡಳಿತ ನೋಡಿದ್ದೀರಿ. ಕಳೆದ 9 ವರ್ಷದಲ್ಲಿ ನಮ್ಮ ಸರ್ಕಾರ ಸ್ವಚ್ಛ ಆಡಳಿತವನ್ನು ನೀಡುತ್ತಿದೆ. ನಮ್ಮ ಅವಧಿಯಲ್ಲಿ ಒಬ್ಬ ಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪ ಬರಲಿಲ್ಲ. ಈ ಬಾರಿ ಪೂರ್ಣ ಪ್ರಮಾಣದ ಬಿಜೆಪಿ (BJP) ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬ ಭರವಸೆ ಇದೆ. ನಾವು ಯಾವುದೇ ಮಂತ್ರಿಯನ್ನು ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿತ್ತು. ರಾಜೀವ್ ಗಾಂಧಿ ಭ್ರಷ್ಟಾಚಾರ ತಡೆಯುವಲ್ಲಿ ನಿಸ್ಸಹಾಯಕರಾಗಿದ್ದರು. ಮೋದಿ ಪ್ರಧಾನಿ ಆಗಿ 10 ಸಾವಿರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ಆಗುವುದಿಲ್ಲ. ಇದು ನೇರವಾಗಿ ರೈತರ ಖಾತೆಗೆ ಸೇರಲಿದೆ. ಇದು ಮೋದಿ ನೇತೃತ್ವದ ಬಿಜೆಪಿಯ ಸ್ವಚ್ಛ ಆಡಳಿತ. ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ನಮಗೆ ಸ್ಥಾನವಿಲ್ಲ ಎಂದು ಕಾಂಗ್ರೆಸ್ನವರಿಗೆ ಗೊತ್ತಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಅದನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದಾಗಿ ಕಾಂಗ್ರೆಸ್ ಹತಾಶೆಗೊಂಡಿದ್ದಾರೆ. ನಮ್ಮ ಪ್ರಧಾನಿ ಬಗ್ಗೆ ವಿಷದ ಸರ್ಪದ ಮಾತನ್ನಾಡಿದ್ದಾರೆ. ಆದರೆ ನಮ್ಮ ಪ್ರಧಾನಿ ಯಾರ ಬಗ್ಗೆಯೂ ತುಚ್ಛವಾಗಿ ಮಾತನಾಡಿಲ್ಲ. ಮೋದಿಯ ಜನಪ್ರಿಯತೆ ನೋಡಿ ಕಾಂಗ್ರೆಸ್ಗೆ ಸಹಿಸಲಾಗುತ್ತಿಲ್ಲ. ಆ ಹೊಟ್ಟೆಯುರಿ ಹಾಗೂ ಹತಾಶೆಗೆ ಈ ರೀತಿಯಾಗಿ ವತಿಸುತ್ತಿದ್ದಾರೆ. ಭಗವಂತ ಅವರಿಗೆ ಹೊಟ್ಟೆಯುರಿ ತಡೆಯುವ ಶಕ್ತಿಯನ್ನು ಕೊಡಲಿ ಎಂದು ಲೇವಡಿ ಮಾಡಿದರು.