ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನಲ್ಲಿರೋ ದರ್ಶನ್ ಗೆ ಅಲ್ಲಿನ ವಾಸ ಕಷ್ಟಕರವಾಗಿದೆ ಎಂದೇ ಹೇಳಲಾಗಿತ್ತು. ಆದರೆ ಈಗ ಕೆಲವು ಶಾಕಿಂಗ್ ವಿಚಾರಗಳು ಹೊರ ಬಿದ್ದಿವೆ. ಕೊಲೆ ಆರೋಪ ಹೊತ್ತಿರುವ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲ ಸೌಕರ್ಯಗಳು ಸಿಗುತ್ತಿವೆ ಎಂಬುದಕ್ಕೆ ಕೆಲ ಸಾಕ್ಷಿಗಳು ಲಭ್ಯವಾಗುತ್ತಿವೆ.
ನಿನ್ನೆ ದರ್ಶನ್ ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿತ್ತು. ಅದರಲ್ಲಿ ದರ್ಶನ್ ಕೈಯಲ್ಲಿ ಸಿಗರೇಟ್ ಹಿಡಿದು ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು. ಜೈಲಿನೊಳಗೆ ನಟೋರಿಯಸ್ ರೌಡಿಗಳ ಜೊತೆ ಹಾಯಾಗಿ ಕುಳಿತು ಮಾತುಕಥೆ ಮಾಡುತ್ತಿರುವ ಕ್ಷಣ ಸೆರೆಯಾಗಿದೆ. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಮುಂತಾದ ರೌಡಿಶೀಟರ್ಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು.
ಇದೀಗ ಮತ್ತೊಂದು ಫೋಟೋ ವೈರಲ್ ಆಗಿದೆ.ಅದರಲ್ಲಿ ದರ್ಶನ್ ವಿಡಿಯೋ ಕಾಲ್ ಮಾಡಿರೋದು ಕಾಣಿಸಿಕೊಂಡಿದೆ. ಈ ಮೂಲಕ ಜೈಲಿನಲ್ಲಿರೋ ದರ್ಶನ್ ಗೆ ಸಕಲ ಸೌಲಭ್ಯವು ಸಿಗುತ್ತಿದೆ ಅನ್ನೋದು ಗೊತ್ತಾಗಿದೆ.
ಪರಪ್ಪನ ಅಗ್ರಹಾರ ಸ್ಪೆಷಲ್ ಬ್ಯಾರಕ್ನಲ್ಲಿ ಇರುವ ದರ್ಶನ್ ಅವರಿಗೆ ವಿಡಿಯೋ ಕಾಲ್ ಸೌಲಭ್ಯವನ್ನೂ ನೀಡಲಾಗಿದೆ. ಅದಕ್ಕೆ ಸಾಕ್ಷಿಯಾಗಿರುವ ವಿಡಿಯೋ ಈಗ ವೈರಲ್ ಆಗಿದೆ. ವ್ಯಕ್ತಿಯೊಬ್ಬರ ಜೊತೆ ದರ್ಶನ್ ಅವರು ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ಜೈಲಿನಲ್ಲಿ ಇರುವ ಬೇರೊಬ್ಬ ಖೈದಿಯ ಮೊಬೈಲ್ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದೆ. ಆಪ್ತರೊಬ್ಬರ ಜೊತೆ ವಿಡಿಯೋ ಕಾಲ್ನಲ್ಲಿ ದರ್ಶನ್ ಅವರು ಮಾತನಾಡಿದ್ದಾರೆ. ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಮಾತುಕತೆ ಮಾಡಲಾಗಿದೆ. ರೆಡ್ಡಿ ಎಂಬಾತನ ಸ್ಟೇಟಸ್ನಲ್ಲಿ ವಿಡಿಯೋ ಹರಿದಾಡಿದೆ.
ಹಣ ಇರುವ ಖೈದಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಾ ಎಂಬ ಅನುಮಾನಕ್ಕೆ ಈ ಫೋಟೋ ಮತ್ತು ವಿಡಿಯೋ ಪುಷ್ಟಿ ನೀಡುತ್ತಿದೆ. ಜೈಲಿನಲ್ಲಿ ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಇಷ್ಟು ದಿನಗಳ ಕಾಲ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕೆಲವರು ಹೇಳಿದ್ದರು. ಆದರೆ ಈಗ ವೈರಲ್ ಆದ ವಿಡಿಯೋ ಮತ್ತು ಫೋಟೋ ನೋಡಿದರೆ ಅವರಿಗೆ ಯಾವುದೇ ಪಶ್ಚಾತ್ತಾಪ ಕಾಡುತ್ತಿಲ್ಲ ಎಂಬುದು ಖಚಿತವಾಗಿದೆ.