ಎರಡು ವರ್ಷಗಳ ಹಿಂದೆ ಡ್ಯಾನಿಲ್ ಮೆಡ್ವೆಡೇವ್ ಎದುರು ಇದೇ ಆರ್ಥರ್ ಆಷ್ ಕ್ರೀಡಾಂಗಣದಲ್ಲಿ ಯುಎಸ್ ಓಪನ್ ಫೈನಲ್ ಸೋತಿದ್ದ ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ ಇದೀಗ ನೂತನ ಇತಿಹಾಸ ರಚಿಸಿದ್ದಾರೆ. 2021ರ ಸೋಲಿಗೆ ಸೇಡು ತೀರಿಸಿಕೊಂಡ 36 ವರ್ಷದ ಚಾಂಪಿಯನ್ ಆಟಗಾರ 6-3, 7-6(7/5), 6-3 ಅಂತರದ ನೇರ ಸೆಟ್ಗಳಿಂದ 27 ವರ್ಷದ ಆಟಗಾರ ಮೆಡ್ವೆಡೇವ್ ಅವರನ್ನು ಬಗ್ಗುಬಡಿದು 2023ರ ಸಾಲಿನ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.
ಕೋವಿಡ್-19 ಲಸಿಕೆ ತೆಗೆದುಕೊಳ್ಳದೆ, ಮಾನವನ ಮೇಲೆ ಲಸಿಕೆ ಪ್ರಯೋಗದ ಮತ್ತು ಒತ್ತಾಯ ಪೂರ್ವಕವಾಗಿ ಲಸಿಕೆ ತೆಗೆದುಕೊಳ್ಳುವ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಶ್ವದ ನಂ.1 ಆಟಗಾರನಿಗೆ ಕಳೆದ ವರ್ಷ ಯುಎಸ್ ಓಪನ್ ಆಡಲು ಅನುಮತಿ ಸಿಕ್ಕಿರಲಿಲ್ಲ. ಇದೀಗ ನಿರ್ಬಂಧಗಳಲ್ಲಿ ಸಡಲತೆ ಸಿಕ್ಕ ನಂತರ ಯುಎಸ್ ಓಪನ್ ಅಂಗಣಕ್ಕೆ ಮರಳಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಆಧುನಿಕ ಟೆನಿಸ್ ಜಗತ್ತಿನಲ್ಲಿ ಸೆರೆನಾ ವಿಲಿಯಮ್ಸ್ (23 ಸಿಂಗಲ್ಸ್ ಟ್ರೋಫಿ) ಅವರ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನ ದಾಖಲೆ ಮುರಿದ ನೊವಾಕ್, ಸಾರ್ವಕಾಲಿಕ ಅತಿ ಹೆಚ್ಚು ಗ್ರ್ಯಾಂಡ್ ಸ್ಯಾಮ್ ಗೆದ್ದಿರುವ ಅಮೆರಿಕದ ಮಾರ್ಗರೇಟ್ ಕೋರ್ಟ್ (24 ಸಿಂಗಲ್ಸ್ ಟ್ರೋಫಿ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಲ್ಲದೆ ಪುರುಷರ ಸಿಂಗಲ್ಸ್ನಲ್ಲಿ 24 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ವಿಶ್ವದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್ನ ದಿಗ್ಗಜ ರಾಫೆಲ್ ನಡಾಲ್ 22 ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಗಳನ್ನು ಹೊಂದಿದ್ದಾರೆ. ಗಾಯದ ಸಮಸ್ಯೆ ಕಾರಣ ಅವರು ಈ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಆಡಿರಲಿಲ್ಲ. ಇನ್ನು ಮಾಜಿ ಆಟಗಾರ ಸ್ವಿಜರ್ಲೆಂಡ್ನ ದಿಗ್ಗಜ ರೋಜರ್ ಫೆಡಡರ್ 20 ಗ್ರ್ಯಾಂಡ್ ಸ್ಲ್ಯಾಮ್ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.