ಮುಂಬೈ: ಶ್ರೀಲಂಕಾ ತಂಡದ ಸ್ಪಿನ್ ಮಾಂತ್ರಿಕ ವಾನಿಂದು ಹಸರಂಗ (Wanindu Hasaranga) ಆರ್ಸಿಬಿಗೆ (RCB) ತಂಡಕ್ಕೆ ಮರಳಿದ್ದು, 2023ರ ಐಪಿಎಲ್ನಲ್ಲಿ (IPL 2023) ಮೊದಲ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ.
ಇತ್ತೀಚೆಗೆ ನ್ಯೂಜಿಲೆಂಡ್ ಜೊತೆಗಿನ ದ್ವಿಪಕ್ಷಿಯ ಸರಣಿ ಹಿನ್ನೆಲೆಯಲ್ಲಿ ಹಸರಂಗ ಶ್ರೀಲಂಕಾ (SriLanka) ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದರು. ಹಾಗಾಗಿ ಆರ್ಸಿಬಿ ತಂಡದಿಂದ ಹೊರಗುಳಿದಿದ್ದರು. ಆದರೀಗ ಆರ್ಸಿಬಿ ತಂಡವನ್ನ ಕೂಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಬ್ಬರಿಸಲು ನಾವ್ ರೆಡಿ ಎಂಬ ಖಡಕ್ ಸಂದೇಶವನ್ನ ಎದುರಾಳಿಗಳಿಗೆ ರವಾನಿಸಿದ್ದಾರೆ.
ವಾನಿಂದು ಹಸರಂಗ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ ಅವರು 26 ವಿಕೆಟ್ ಉರುಳಿಸಿ, 7.54ರ ಸರಾಸರಿಯಲ್ಲಿ ಬೌಲಿಂಗ್ ನಡೆಸಿದ್ದರು ಈ ಮೂಲಕ 2022ರ ಐಪಿಎಲ್ನಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಯನ್ನೂ ಹಸರಂಗ ಮಾಡಿದ್ದರು. ಇತ್ತೀಚೆಗಷ್ಟೇ ಐಪಿಎಲ್ನಲ್ಲಿ ಆರ್ಸಿಬಿ ತಂಡ ಸೇರಿಕೊಂಡ ಹಸರಂಗ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಆರ್ಸಿಬಿ ತಂಡದ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ವಾನಿಂದು ಹಸರಂಗ, ಆರ್ಸಿಬಿ ತಂಡವನ್ನು ಕೂಡಿಕೊಳ್ಳಲು ಹರ್ಷವಾಗುತ್ತಿದೆ. ಆರ್ಸಿಬಿ ತಂಡವನ್ನು ಸೇರಿಕೊಳ್ಳಲು ಉತ್ಸಾಹದಿಂದ ಕಾಯುತ್ತಿದ್ದೆ. ತಂಡದ ಆಟಗಾರರು ಅತ್ಯುತ್ತಮವಾಗಿ ಸಿದ್ಧತೆ ನಡೆಸುತ್ತಿದ್ದು ಹರ್ಷ ಮೂಡಿಸಿದೆ. ಈ ಬಾರಿ ಆರ್ಸಿಬಿ ತಂಡದ ಪರವಾಗಿ ಮೊದಲ ಬಾರಿಗೆ ಬೌಲಿಂಗ್ ಮಾಡಲಿದ್ದೇನೆ. ವೈಯಕ್ತಿಕವಾಗಿ ಈ ಸವಾಲನ್ನು ಎದುರಿಸಲು ಸಜ್ಜಾಗಿದ್ದೇನೆ ಎಂದು ಹೇಳಿದ್ದಾರೆ.
ಏಪ್ರಿಲ್ 15ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ. ಈಗಾಗಲೇ ಸತತ 4 ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಖಾತೆ ತೆರೆಯುವ ತವಕದಲ್ಲಿದ್ದರೆ, ಸತತ ಎರಡು ಸೋಲು ಅನುಭವಿಸಿರುವ ಆರ್ಸಿಬಿ ತಂಡ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಆರ್ಸಿಬಿ ಉತ್ತಮ ಕಮ್ಬ್ಯಾಕ್ ಆಗುವ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಮತ್ತೆ – ಮತ್ತೆ ಹೇಳ್ತಿದ್ದಾರೆ.