ಬೆಂಗಳೂರು : ಒಂದು ನಯಾ ಪೈಸೆ ಕೊಡದೆ ಯಾವ ಬಿಲ್ ಕೂಡ ಪಾಸ್ ಆಗಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪರೋಕ್ಷವಾಗಿ ಕಮಿಷನ್ ಆರೋಪ ಮುಂದುವರಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಕಮಿಷನ್ ಪರ್ಸೆಂಟೇಜ್ ಕಡಿಮೆ ಆಗಿದೆ. ಆದರೆ, ಎಷ್ಟು ಕಡಿಮೆ ಆಗಿದೆ ಗೊತ್ತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು.
ಬಿಬಿಎಂಪಿ ಬಿಲ್ ಕ್ಲಿಯರ್ ಮಾಡಿಕೊಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಮಗೆ ಭರವಸೆ ಕೊಟ್ಟಿದ್ದಾರೆ. ಶೀಘ್ರವೇ ಎಲ್ಲಾ ಬಾಕಿ ಬಿಲ್ ಕ್ಲಿಯರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇನ್ನೂ ಸಾವಿರಾರು ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದೆ. ಅವೆಲ್ಲವನ್ನೂ ರಾಜ್ಯ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುವ ವಿಶ್ವಾಸ ನಮಗಿದೆ ಎಂದು ಹೇಳಿದರು.
600 ಕೋಟಿಯಲ್ಲಿ ಎಷ್ಟು ಪರ್ಸೆಂಟೇಜ್ ಕೊಟ್ಟಿದ್ದೀರಿ? ಎಂಬ ಪ್ರಶ್ನೆಗೆ, ಒಂದೊಂದೇ ಬಿಲ್ ಕ್ಲಿಯರ್ ಆಗುತ್ತಿದೆ, ಬಿಬಿಎಂಪಿಯದ್ದೂ ಆಗುತ್ತಿದೆ. ಕಮಿಷನ್ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ರಾಜ್ಯ ಸರ್ಕಾರಕ್ಕೆ ಯಾವುದೇ ಕ್ಲೀನ್ ಚಿಟ್ ಕೊಡಲ್ಲ ಎಂದು ಕೆಂಪಣ್ಣ ಮತ್ತೆ ಯೂ ಟರ್ನ್ ಹೊಡೆದಿದ್ದಾರೆ.