ನವದೆಹಲಿ: ಬಿಜೆಪಿ ನಾಯಕಿ ನೂಪುರ್ ಶರ್ಮಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಪ್ರವಾದಿ ಮೊಹಮ್ಮದರ ಬಗ್ಗೆ ವಿವಾದಿತ ಹೇಳಿಕೆ ನೀಡಿ ಪಕ್ಷದಿಂದ ಅಮಾನತಾಗಿರುವ ನೂಪುರ್ ಅವರನ್ನು ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಸ್ಪರ್ಧಿಸಲು ಬಿಜೆಪಿ ಮುಂದಾಗಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ರಾಯ್ಬರೇಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಸೋನಿಯಾ ಗಾಂಧಿ ಈ ಬಾರಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಈ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.
ನೂಪುರ್ಶರ್ಮಾ ಈ ಹಿಂದೆ 2015r ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ವಿರುದ್ದ ಸೋತಿದ್ದರು. ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೂಪುರ್ಶರ್ಮಾ ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯಿಂದ ಅಮಾನತಾಗಿದ್ದರು.
ರಾಯ್ಬರೇಲಿ ಕೈ ಕೋಟೆ:
ರಾಯ್ಬರೇಲಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದರು. 1999 ರಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಾ ಬಂದಿದ್ದಾರೆ. 1999 ರಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು 2004ರ ಚುನಾವಣೆಯಿಂದ 2019ರ ಚುನಾವಣೆಯವರೆಗೂ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಸತತವಾಗಿ ಆಯ್ಕೆ ಆಗುತ್ತಿದ್ದಾರೆ.