ರಾಯ್ಪುರ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಸಿಖ್ಖರ ಕುರಿತು ನೀಡಿದ ಹೇಳಿಕೆ ಖಂಡಿಸಿ ಛತ್ತೀಸ್ಗಢದ ಬಿಜೆಪಿ ನಾಯಕರು ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ.
ರಾಯ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು, ಬಿಲಾಸ್ಪುರ ಜಿಲ್ಲಾ ಸಿವಿಲ್ ಲೈನ್ಸ್ ಠಾಣೆಯಲ್ಲಿ ಹಾಗೂ ದುರ್ಗ್ ಜಿಲ್ಲೆಯ ಕೋಟ್ಬಾಲಿ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ರಾಹುಲ್ ಗಾಂಧಿ ವಿರುದ್ಧ ಬಿಎನ್ಎಸ್ ಸೆಕ್ಷನ್ 299 ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢದ ಬಿಜೆಪಿ ವಕ್ತಾರ ಅಮರ್ಜೀತ್ ಸಿಂಗ್ ಛಾಬ್ರಾ, ರಾಹುಲ್ ಹೇಳಿಕೆಯೂ ಸಿಖ್ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ರಾಯ್ಪುರದಲ್ಲಿ ದೂರು ದಾಖಲಿಸಿದ್ದಾರೆ.
ಭಾರತದಲ್ಲಿ ಸಿಬ್ಬರಿಗೆ ಪಗಡಿ ಅಥವಾ ಕಡಾ ಧರಿಸಲು ಹಾಗೂ ಗುರುದ್ವಾರಕ್ಕೆ ಹೋಗಲು ಅನುಮತಿ ನೀಡುತ್ತಾರೆಯೇ? ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಹೇಳಿಕೆ ನೀಡಿರುವುದಾಗಿ ವಿವರಿಸಿದ್ದಾರೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲೇ ಸಿಖ್ ಸಮುದಾಯದವರು ಪಗಡಿ ಮತ್ತು ಕಡಾ ಧರಿಸಿ ಗುರುದ್ವಾರ ಪ್ರವೇಶಿಸುತ್ತಾರೆ. ಪ್ರಧಾನಿ ಕೂಡ ಪಗಡಿ ಮತ್ತು ಕಡಾ ಧರಿಸಿಯೇ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ ಎಂದು ಛಾಬ್ರಾ ಹೇಳಿದ್ದಾರೆ.