ಮುಂಬಯಿ: ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಎನ್ಸಿಪಿ ವಿಭಜನೆಯಾಗುವ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎದ್ದಿರುವ ನಡುವೆಯೇ ಆಡಳಿತಾರೂಢ ಮಿತ್ರಪಕ್ಷಗಳಿಗೆ ಇದು ಮುಜುಗರ ಉಂಟುಮಾಡಿದೆ. ಪ್ರತಿಪಕ್ಷಗಳಿಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೊಸ ಅಸ್ತ್ರವಾಗಿ ದೊರಕಿದೆ. ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಮಂಗಳವಾರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ತಮ್ಮ ವೈರಲ್ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.
ಪತ್ರವನ್ನು ಟ್ವೀಟ್ ಮಾಡಿರುವ ಸೋಮಯ್ಯ, ಸುದ್ದಿ ವಾಹಿನಿಯೊಂದರಲ್ಲಿ ತಾನು ಅನೇಕ ಮಹಿಳೆಯರಿಗೆ ಕಿರುಕುಳ ನೀಡಿದ್ದೇನೆ ಎಂದು ಹೇಳುವ ವೀಡಿಯೊ ಕ್ಲಿಪ್ ತೋರಿಸಲಾಗಿದೆ ಮತ್ತು ಅಂತಹ ಅನೇಕ ತುಣುಕುಗಳು ಲಭ್ಯವಿವೆ. ನಾನು ಯಾವುದೇ ಮಹಿಳೆಯರನ್ನು ನಿಂದಿಸಿಲ್ಲ ಮತ್ತು ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮರಾಠಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ.
ಅಶ್ಲೀಲ ವಿಡಿಯೋ ವಿಚಾರವಾಗಿ ಕಿರಿತ್ ಸೋಮಯ್ಯ ಮತ್ತು ಬಿಜೆಪಿ- ಶಿವಸೇನಾ- ಎನ್ಸಿಪಿ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆ ಅವರ ಶಿವಸೇನಾ, ಈ ವಿಡಿಯೋ ಅವರ ನಡತೆ ಹಾಗೂ ನೈಜ ಮುಖವನ್ನು ಅನಾವರಣಗೊಳಿಸಿವೆ ಎಂದು ಟೀಕಾಪ್ರಹಾರ ನಡೆಸಿವೆ. ಇಂತಹ ಇನ್ನೂ ಅನೇಕ ವಿಡಿಯೋ ತುಣುಕುಗಳು ಇವೆ ಎಂದು ಅವು ಹೇಳಿಕೊಂಡಿವೆ.
‘ಆಡಳಿತ ಸಮ್ಮಿಶ್ರ ಸರ್ಕಾರದ ಚಾರಿತ್ರ್ಯ ಮತ್ತು ನಿಜ ಮುಖ ಇಂದು ಬಯಲಾಗಿದೆ. ಕಿರಿತ್ ಸೋಮಯ್ಯ ಹಲವು ಶಾಸಕರು, ಸಂಸದರನ್ನು ಬ್ಲಾಕ್ಮೇಲ್ ಮಾಡಿದ್ದಾರೆ. ಈಗ ಒಂದಷ್ಟು ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿರುವುದನ್ನು ನಾವು ನೋಡಬಹುದು. ಎಂಟು ಗಂಟೆಯ ಕ್ಲಿಪ್ ಹೊರಬಿದ್ದಿದೆ. ಕ್ಲಿಪ್ನಿಂದಾಗಿ ಎಷ್ಟು ಮಹಿಳೆಯರು ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿರಬಹುದು ಎಂದು ನಾನು ಊಹಿಸಲು ಸಹ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಹೇಳಿದ್ದಾರೆ.