ಭುವನೇಶ್ವರ: ಒಡಿಶಾದ ರೈಲು ಅಪಘಾತ (Odisha Train Accident) ಸಂಭವಿಸಿ ಇಂದಿಗೆ 2 ತಿಂಗಳುಗಳು ಕಳೆದಿವೆ. ಆದರೂ ಭುವನೇಶ್ವರದ ಆಸ್ಪತ್ರೆಯಲ್ಲಿ ಇರಿಸಲಾದ 29 ಮೃತದೇಹಗಳ ಗರುತು ಇನ್ನೂ ಪತ್ತೆಯಾಗಿಲ್ಲ ಎಂದು ಎಐಐಎಂಎಸ್ನ (All India Institute of Medical Sciences) ವೈದ್ಯಕೀಯ ಅಧೀಕ್ಷಕ ದಿಲೀಪ್ ಕುಮಾರ್ ಪರಿದಾ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ 162 ದೇಹಗಳನ್ನು ಇರಿಸಲಾಗಿತ್ತು. ಆದರಲ್ಲಿ 113 ಮೃತದೇಹಗಳ ಗುರುತು ಪತ್ತೆಯಾಗಿದ್ದು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತ ದೇಹಗಳಿಗಾಗಿ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಖಚಿತ ವರದಿಯ ಬಳಿಕವಷ್ಟೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು. ಅಲ್ಲದೇ ಡಿಎನ್ಎ ಪರೀಕ್ಷೆ ಬಳಿಕವೂ ಗುರುತು ಪತ್ತೆಯಾಗದ ಮೃತದೇಹಗಳ ಸಂಸ್ಕಾರದ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ರೈಲು ಅಪಘಾತದ ಬಗ್ಗೆ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಮೊದಲ ವರದಿಯಲ್ಲಿ ರೈಲು ದುರಂತಕ್ಕೆ ಸಿಗ್ನಲಿಂಗ್ ಮತ್ತು ಟ್ರಾಫಿಕ್ ಕಂಟ್ರೋಲ್ ವಿಭಾಗಗಳನ್ನು ಹೊಣೆ ಮಾಡಲಾಗಿದೆ. ಈ ಅಪಘಾತಕ್ಕೆ ಇದೇ ಕಾರಣ ಎಂದು ರೈಲ್ವೆ ಸಚಿವಾಲಯ ರಾಜ್ಯಸಭೆಯಲ್ಲಿ ವರದಿಯನ್ನು ಬಹಿರಂಗ ಪಡಿಸಿತ್ತು. ಸಿಗ್ನಲಿಂಗ್ ದೋಷಗಳ ಪರಿಣಾಮವಾಗಿ ರಾಂಗ್ ಲೈನ್ಗೆ ಹಸಿರು ಸಿಗ್ನಲ್ ಪ್ರದರ್ಶಿಸಲಾಯಿತು. ಇದು ನಿಂತಿದ್ದ ಸರಕು ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿಯಾಗಲು ಕಾರಣವಾಯಿತು. ಬಳಿಕ ಡಿಕ್ಕಿಯಾಗಿ ಪಕ್ಕದ ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳಿಗೆ ಮತ್ತೊಂದು ರೈಲು ವೇಗವಾಗಿ ಬಂದು ಡಿಕ್ಕಿಯಾಗಿತ್ತು.
ಜೂ.2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು. ಬಳಿಕ ಕೆಲ ಬೋಗಿಗಳು ಪಕ್ಕದ ಹಳಿ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ ಅದೇ ಹಳಿಯಲ್ಲಿ ಬಂದ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ 288 ಜನ ಸಾವಿಗೀಡಾಗಿದ್ದರು.