ಯಾದಗಿರಿ: ಜಿಲ್ಲೆಯಲ್ಲಿ ಜೀವಜಲ, ಜೀವಕ್ಕೆ ಮಾರಕವಾಗ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಕಲುಷಿತಗೊಂಡು, ಜನ ಸಾವಿಗೀಡಾಗ್ತಿದ್ದಾರೆ. ಮೂರು ಜನ ಸಾವನ್ನಪ್ಪಿದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದ್ದಾರೆ.
ಯಾದಗಿರಿ (Yadagiri) ಜಿಲ್ಲೆಯಲ್ಲಿ ಜೀವ ಜಲ ಕಲುಷಿತವಾಗುತ್ತಿದೆ. ಗ್ರಾಮಗಳಿಗೆ ಪೊರೈಕೆ ಮಾಡೋ ನೀರು ಜನರ ಜೀವ ಬಲಿ ಪಡಿತಿದ್ರೆ, ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಪಂಚಾಯಿತಿ ಪೂರೈಕೆ ಮಾಡುವ ಪೈಪ್‍ಲೈನ್‍ನಲ್ಲಿ ಮಲಮಿಶ್ರಿತ ಕಲುಷಿತ ನೀರು ಪೂರೈಕೆಯಾಗಿ ಮೂರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಮತ್ತದೇ ರೀತಿಯ ಅವಾಂತರ ಆಗೋ ಎಲ್ಲಾ ಸಾಧ್ಯತೆಗಳಿಗೆ ಅದೇ ಕ್ಷೇತ್ರ ವ್ಯಾಪ್ತಿಯ ಸೈದಾಪುರ ಗ್ರಾಮದಲ್ಲಿ ಕಂಡುಬಂದಿದೆ.
ಸೈದಾಪುರ ಗ್ರಾಮಸ್ಥರಿಗೆ ಪೂರೈಕೆ ಮಾಡುವ ನೀರಿನ ಪೈಪ್ ಸೋರಿಕೆಯಾಗಿ. ಪೈಪ್ ಸೋರಿಕೆಯಿಂದ ಚರಂಡಿ ನೀರು ಮಿಕ್ಸ್ ಆಗುತ್ತಿದೆ. ಚರಂಡಿ ಪಕ್ಕದಲ್ಲಿರುವ ಪೈಪ್ ಲಿಕೇಜ್ ಆಗ್ತಿರೋದ್ರಿಂದ ಜನ ಜೀವ ಭಯದಲ್ಲೇ ನೀರು ಕುಡಿಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ನೀರಿನ ಲಿಕೇಜ್ ತಡೆಗಟ್ಟುವ ಜೊತೆಗೆ ನೀರಿನ ಘಟಕ ಆರಂಭ ಮಾಡಿ ಶುದ್ಧ ನೀರು ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅನಪುರ ಘಟನೆ ನಂತರ ಯಾದಗಿರಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೂರೈಕೆಯಾಗೋ ನೀರಿನ ಲಿಕೇಜ್ ಅನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ನಿರ್ಮಾಣ ಮಾಡಿದ್ರೂ ಜನರಿಗೆ ಪ್ರಯೋಜನಕ್ಕಿಲ್ಲದಂತಾಗಿದೆ. ಪೈಪ್ ಲೈನ್ ಮೂಲಕವೇ ನೀರು ಪೂರೈಕೆ ಮಾಡ್ತಿದ್ರೂ, ಅದನ್ನ ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ಪೈಪ್‍ಲೈನ್ ಲಿಕೇಜ್ ಆಗಿದ್ರೂ ಅದನ್ನ ಸರಿ ಮಾಡೋ ಕೆಲಸಕ್ಕೂ ಮುಂದಾಗ್ತಿಲ್ಲ.
ಸೈದಾಪುರ ಗ್ರಾಮದಲ್ಲೂ ಲಕ್ಷಾಂತರ ರೂ. ಖರ್ಚು ಮಾಡಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಕೆ ಮಾಡಿಲಾಗಿದೆ. ಆದರೆ ನೀರಿನ ಘಟಕಗಳನ್ನು ದುರಸ್ಥಿ ಮಾಡಿ ಪಂಚಾಯಿತಿ ಅಧಿಕಾರಿಗಳು ಶುದ್ಧ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ ಸರಕಾರ 415 ನೀರಿನ ಘಟಕಗಳನ್ನು ಅಳವಡಿಕೆ ಮಾಡಿದೆ. ಹೀಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ, ಜನರಿಗೆ ಶುದ್ಧ ನೀರು ಪೂರೈಸಲು ನೀರಿನ ಘಟಕಗಳನ್ನ ರಾಜ್ಯಾದ್ಯಂತ ಅಳವಡಿಕೆ ಮಾಡಿದ್ರೂ ಉಪಯೋಗಕ್ಕಿಲ್ಲದಂತಾಗಿದೆ.
ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಗರ-ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ ಮಾಡುವ ಪೈಪ್‍ಲೈನ್ ಸೋರಿಕೆ ಪತ್ತೆ ಹಚ್ಚಿ ಸೋರಿಕೆ ಕಡಿವಾಣ ಹಾಕಬೇಕಿದೆ. ಹೀಗಾಗಿ ಬಂದ್ ಆಗಿರುವ ನೀರಿನ ಘಟಕಗಳನ್ನು ದುರಸ್ಥಿ ಮಾಡಿಸಿ, ಮತ್ತೊಂದು ಅನಪುರ ದುರಂತಕ್ಕೆ ಅವಕಾಶ ಮಾಡಿಕೊಡದಂತೆ ಕೂಡಲೇ ಎಚ್ಚೆತ್ತುಕೊಂಡು ಜನರಿಗೆ ಶುದ್ಧ ನೀರು ಪೂರೈಸುವ ಕೆಲಸವನ್ನ ಅಧಿಕಾರಿಗಳು ಮಾಡಬೇಕಿದೆ.