ಬೆಂಗಳೂರು: ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಇದರ ನಡುವೆ ಚಿಕನ್ ಹಾಗೂ ಮೊಟ್ಟೆ ದರ ಏರಿಕೆಯಾಗಿದ್ದು, ಮಾಂಸ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಹೌದು..ಗರಿಷ್ಠ ತಾಪಮಾನ ಮತ್ತು ಹಿಟ್ ವೆವ್ಸ್ ಪರಿಣಾಮದಿಂದಾಗಿ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ.
ರಾಜ್ಯದಲ್ಲಿ 35 ಸಾವಿರದಿಂದ 40 ಸಾವಿರ ಮಂದಿ ಕೋಳಿ ಸಾಕಣೆದಾರರಿದ್ದು, ಪ್ರತಿ ವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 1.7 ಕೋಟಿ ಕೆ.ಜಿ.ಯಷ್ಟು ಕೋಳಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಪ್ರತಿ ಕೆ.ಜಿ. ಕೋಳಿ ಉತ್ಪಾದನೆಗೆ ಈ ಹಿಂದೆ 60ರಿಂದ 70 ರೂ. ಖರ್ಚಾಗುತ್ತಿತ್ತು. ಈಗ ಕೆ.ಜಿ.ಗೆ 98 ರಿಂದ 100 ರೂ. ತಗುಲುತ್ತಿದೆ. ಮಾರುಕಟ್ಟೆಯಲ್ಲಿ ಕೋಳಿಗಳ ಬೇಡಿಕೆ ಹೆಚ್ಚಳವಾಗುತ್ತಿದ್ದು, ಪ್ರತಿ ಕೆಜಿ ಕೋಳಿ ಮಾಂಸದ ದರ 300 ರೂ.ಗಳ ಗಡಿ ತಲುಪಿದೆ.
ಇನ್ನು ಕುಕ್ಕಟೋದ್ಯಮಕ್ಕೆ ಬಿಸಿಲಿನ ಝಳವೂ ಶಾಪವಾಗಿದ್ದು, ಬೇಸಿಗೆಯಲ್ಲಿ ಕೋಳಿಗಳಿಗೆ ಐಬಿಎಚ್ ಸೋಂಕು ತಗುಲುವುದರಿಂದ, ರೋಗ ನಿರೋಧಕ ಶಕ್ತಿ ಕುಂದುತ್ತೆ. ಹೀಗಾಗಿ ಬೇಡಿಕೆ ಇರುವಷ್ಟು ಕೋಳಿ ಮಾಂಸ ಉತ್ಪಾದನೆ ಇಲ್ಲ. ಹೀಗಾಗಿ, ಕಳೆದ ಒಂದು ತಿಂಗಳಲ್ಲಿ ಅನೇಕ ಬಾರಿ ಕೋಳಿ ದರ ಏರಿಕೆಯಾಗಿದ್ದು, ಒಂದು ವಾರದ ಹಿಂದೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ ಈಗ 250 ರೂಪಾಯಿಗೆ ತಲುಪಿದೆ.