ತಿರುವನಂತಪುರಂ: ಕೋಝಿಕ್ಕೋಡ್ನಲ್ಲಿ (Kozhikode) ಮೃತಪಟ್ಟ ಇಬ್ಬರಲ್ಲಿ ಓರ್ವ ವ್ಯಕ್ತಿಗೆ ನಿಫಾ ವೈರಸ್ (Nipah Virus) ತಗುಲಿರುವುದು ದೃಢಪಟ್ಟಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಫಾ ಸೋಂಕಿನಿಂದಲೇ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ವ್ಯಕ್ತಿ ಸೋಮವಾರ ಸಾವನ್ನಪ್ಪಿದ್ದರು. ನಿಫಾ ವೈರಸ್ ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಮೃತನ ಸ್ಯಾಂಪಲ್ ಅನ್ನು ಟೆಸ್ಟ್ಗೆ ಪುಣೆಗೆ ಕಳುಹಿಸಲಾಗಿತ್ತು. ಸದ್ಯ ಅದರ ರಿಪೋರ್ಟ್ ಬಂದಿದ್ದು, ನಿಫಾ ವೈರಸ್ನಿಂದಲೇ ಮೃತಪಟ್ಟಿರುವುದು ಬಯಲಾಗಿದೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಸ್ಯಾಂಪಲ್ ಫಲಿತಾಂಶ ಬಂದ ತಕ್ಷಣ ದೆಹಲಿಯಿಂದ ಉನ್ನತ ಅಧಿಕಾರಿಗಳ ಕೇಂದ್ರ ತಂಡ ಕೋಯಿಕ್ಕೋಡ್ಗೆ ಆಗಮಿಸಲಿದೆ.
ಇಬ್ಬರ ಸಾವು: ಕೋಝಿಕ್ಕೋಡ್ನಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಮೃತಪಟ್ಟವರಲ್ಲಿ ಒಬ್ಬರ ಕುಟುಂಬದ ನಾಲ್ವರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 10 ತಿಂಗಳ ಮಗುವಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 75 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ.