ನವದೆಹಲಿ: ವಾರಕ್ಕೊಂದು ಹಗರಣ ಕರ್ನಾಟಕದಲ್ಲಿ ನಡೆಯುತ್ತಿದ್ದು, ಎಲ್ಲಾ ನಿಗಮಗಳಲ್ಲಿ ಹಣ ಎತ್ತಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಇಂದು(ಮಂಗಳವಾರ) ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಕರ್ನಾಟಕ, ಕಾಂಗ್ರೆಸ್ ಹೈಕಮಾಂಡ್ನ ಎಟಿಎಂ ಆಗಿದೆ. ರಾಹುಲ್, ಸೋನಿಯಾ ಗಾಂಧಿ ಸೊಚನೆ ಮೇರೆಗೆ ಹಣ ವರ್ಗಾವಣೆ ಮಾಡಿ, ದಲಿತರ ಹಣವನ್ನು ತೆಲಂಗಾಣ ಚುನಾವಣೆಯಲ್ಲಿ ಬಳಸಲಾಗಿದೆ. ಕಾಂಗ್ರೆಸ್ನವರು ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಹಾಗಾದರೆ ದಲಿತರ ಹಣ ಎಲ್ಲಿ ಹೋಯ್ತು? ಎಂದು ಕಿಡಿಕಾರಿದರು.
‘ಕರ್ನಾಟಕ ಐಟಿ-ಬಿಟಿ ಎಂದು ವಿಶ್ವದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ವಿಧಾನಸಭೆ, ಸಿಎಂ ಕಾರ್ಯಕ್ರಮಗಳಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಾಗುತ್ತಿದೆ. ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ ಬಗ್ಗೆ ಯೋಚಿಸುತ್ತಿಲ್ಲ, ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು. ಕಾನೂನಿನ ವಿರುದ್ಧವಾಗಿ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ಅಕ್ರಮವಾಗಿ 14 ಸೈಟ್ ಪಡೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಮುಡಾ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಕೂಡ ನಡೆಯುತ್ತಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಲು ಸಿಎಂ ರಾಜೀನಾಮೆ ಅಗತ್ಯವಿದೆ. ಸಿದ್ದರಾಮಯ್ಯ ವಿರುದ್ಧವೇ ಲೋಕಾಯುಕ್ತ ಎಫ್ಐಆರ್ ದಾಖಲಿಸಬೇಕಿತ್ತು ಎಂದು ಸಿಎಂ ವಿರುದ್ದ ಹರಿಹಾಯ್ದಿದ್ದಾರೆ.