ಸಿಯೋಲ್ ಗಡಿ ಪ್ರದೇಶಗಳಲ್ಲಿ ಕಸ ಮತ್ತು ಗೊಬ್ಬರ ತುಂಬಿದ ಒಂದು ಸಾವಿರ ಬಲೂನ್ಗಳನ್ನು ಹಾರಿಬಿಟ್ಟ ಉತ್ತರ ಕೊರಿಯಾದ ವಿರುದ್ಧ ದಕ್ಷಿಣ ಕೊರಿಯಾ ಪ್ರತೀಕಾರಕ್ಕೆ ಮುಂದಾಗಿದೆ. ತಾನು ಧ್ವನಿವರ್ಧಕಗಳಲ್ಲಿ ಉತ್ತರ ಕೊರಿಯಾ ವಿರೋಧಿ ಪ್ರಚಾರ ಮಾಡುವುದಾಗಿ ಘೋಷಿಸಿದೆ.
ಇದರಿಂದ ಉತ್ತರ ಕೊರಿಯಾ ಕೆರಳುವ ಸಾಧ್ಯತೆಯಿದ್ದು, ಅದು ಪ್ರತೀಕಾರದ ಭಾಗವಾಗಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಸಂಭವ ಇದೆ. ಎರಡೂ ಬದ್ಧವೈರಿ ದೇಶಗಳ ನಡುವೆ ಇದು ಮನಸ್ತಾಪ ಹೆಚ್ಚಿಸಲಿದ್ದು, ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ ಬಿಕ್ಕಟ್ಟನ್ನು ತೀವ್ರಗೊಳಿಸಬಹುದು ಎನ್ನಲಾಗುತ್ತಿದೆ.
ದಕ್ಷಿಣ ಕೊರಿಯಾ ರಾಷ್ಟ್ರೀಯ ಭದ್ರತಾ ನಿರ್ದೇಶಕ ಚಾಂಗ್-ಹೊ-ಜಿನ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ನಂತರ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಲು ನಿರ್ಧರಿಸಲಾಯಿತು ಎಂದು ಸಿಯೋಲ್ನ ಅಧ್ಯಕ್ಷೀಯ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಕೊರಿಯಾ ನೂರಾರು ಬಲೂನ್ಗಳನ್ನು ದಕ್ಷಿಣ ಕೊರಿಯಾದೊಳಗೆ ಹಾರಿಸುವುದನ್ನು ಮುಂದುವರೆಸಿದ್ದು, ಮೇ ತಿಂಗಳಿನಿಂದ ಮೂರನೇ ಬಾರಿಗೆ ಹೀಗೆ ಮಾಡಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಸೇನೆ ಹೇಳಿದೆ.