ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಐದು ದಿನಗಳು ಮಾತ್ರವೇ ಭಾಕಿ ಇದೆ. ಟ್ರಂಪ್ ಹಾಗೂ ಕಮಲಾ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಇಬ್ಬರು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ವಿಸ್ಕಾನ್ಸಿನ್ನಲ್ಲಿ ಇಬ್ಬರೂ ಬಿರುಸಿನ ರ್ಯಾಲಿಯಲ್ಲಿ ನಡೆಸಿದ್ದಾರೆ. ಇಬ್ಬರ ನಡುವೆ ರಾಜಕೀಯ ವಾಕ್ಸಮರವೂ ಜೋರಾಗಿದ್ದು ಮತದಾರರು ಯಾರ ಪರ ಒಲವು ತೋರಿಸುತ್ತಾರೆ ಎಂಬ ಕುತೂಹಲ ಶುರವಾಗಿದೆ.
ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಬುಧವಾರದ ವೇಳೆಗೆ ಸುಮಾರು 6 ಕೋಟಿ ಮತದಾರರು ಇ-ಮೇಲ್ ಮೂಲಕ ಅಥವಾ ನೇರ ಮತದಾನದ ಮೂಲಕ ಮತ ಚಲಾವಣೆ ಮಾಡಿದ್ದಾರೆ. ಏಕಕಾಲದಲ್ಲಿ ಚುನಾವಣಾ ಪ್ರಚಾರ ಮತ್ತು ಮತದಾನ ಪ್ರಕ್ರಿಯೆ ನಡೆಯುವುದು ಅಮೆರಿಕ ಪ್ರಜಾಪ್ರಭುತ್ವದ ವೈಶಿಷ್ಟ್ಯವೆನಿಸಿದೆ.
ಶ್ವೇತಭವನದ ಗದ್ದುಗೆ ಏರಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿರುವುದನ್ನು ಇತ್ತೀಚಿನ ಸಮೀಕ್ಷೆಗಳು ತೆರೆದಿಟ್ಟಿವೆ.
ಸಿಎನ್ಎನ್ ನಡೆಸಿರುವ ಇತ್ತೀಚಿನ ಸಮೀಕ್ಷೆಗಳು, ಹ್ಯಾರಿಸ್ ಅವರಿಗೆ ಮಿಷಿಗನ್ ಮತ್ತು ವಿಸ್ಕಾನ್ಸಿನ್ನಲ್ಲಿ ಪರಿಸ್ಥಿತಿ ಕೊಂಚ ಅನುಕೂಲಕರವಾಗಿದೆ. ಆದರೆ, ಪೆನ್ಸಿಲ್ವೇನಿಯಾದಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದಾರೆ ಎಂದು ಹೇಳಿವೆ.
ಮಿಷಿಗನ್ನಲ್ಲಿ ಹ್ಯಾರಿಸ್ (ಶೇ 48) ಅವರು ಟ್ರಂಪ್ (ಶೇ 43)ಅವರಿಗಿಂತ ಹೆಚ್ಚು ಮತದಾರರ ಬೆಂಬಲ ಹೊಂದಿದ್ದಾರೆ. ಅಲ್ಲದೆ, ವಿಸ್ಕಾನ್ಸಿನ್ನಲ್ಲಿ ಹ್ಯಾರಿಸ್ ಅವರಿಗೆ ಶೇ 51ರಷ್ಟು ಮತ್ತು ಟ್ರಂಪ್ ಅವರಿಗೆ ಶೇ 45 ರಷ್ಟು ಮತದಾರರ ಬೆಂಬಲವಿದೆ. ಪೆನ್ಸಿಲ್ವೇನಿಯಾದಲ್ಲಿ ಇಬ್ಬರಿಗೂ ಶೇ 48 ರಷ್ಟು ಮತದಾರರ ಬೆಂಬಲ ವ್ಯಕ್ತವಾಗಿದೆ ಎಂದು ಇತ್ತೀಚಿನ ಮಾಹಿತಿಗಳು ಹೇಳಿವೆ.
‘ಫಾಕ್ಸ್’ ಸಮೀಕ್ಷೆ ಪ್ರಕಾರ, ಟ್ರಂಪ್ ಅವರು ಪೆನ್ಸಿಲ್ವೇನಿಯಾ ಮತ್ತು ನಾರ್ತ್ ಕರೊಲಿನಾದಲ್ಲಿ ಕಮಲಾ ಅವರಿಗಿಂತ ಕೇವಲ ಶೇ 1ರಷ್ಟು ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಮಿಷಿಗನ್ನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದಾರೆ.
ಕಮಲಾ ಅವರು ಮಿಷಿಗನ್, ವಿಸ್ಕಾನ್ಸಿನ್ ಮತ್ತು ನೆವಡಾದಲ್ಲಿ ಮುಂದಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಬುಧವಾರ ಹೇಳಿದೆ. ಇದೇ ವೇಳೆ, ಪೆನ್ಸಿಲ್ವೇನಿಯಾದಲ್ಲಿ ಅವರ ಮುನ್ನಡೆ ಕಳೆದ ವಾರದಿಂದ ಕುಸಿತ ಕಂಡಿದೆ. ಅರಿಜೋನಾ, ಜಾರ್ಜಿಯಾ ಮತ್ತು ನಾರ್ತ್ ಕರೊಲಿನಾದಲ್ಲಿ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಶ್ವೇತಭವನದ ಗದ್ದುಗೆ ಹಿಡಿಯಲು ವಿಜಯಿ ಅಭ್ಯರ್ಥಿಯು 538 ಎಲೆಕ್ಟ್ರೋಲ್ ಮತಗಳಲ್ಲಿ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯಬೇಕು. ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಜಾರ್ಜಿಯಾ, ಮಿಷಿಗನ್, ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ಈ ಏಳು ರಾಜ್ಯಗಳು ನಿರ್ಣಾಯಕ ಎನಿಸಿವೆ.