ನವದೆಹಲಿ: ಕೊರೊನಾ ಲಸಿಕೆ ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳಲ್ಲಿ ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ನಿವೃತ್ತ ICMR ವಿಜ್ಞಾನಿ ಡಾ.ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.
ಅಸ್ಟ್ರಾಜೆನೆಕಾ (AstraZeneca) ಕೋವಿಡ್ ಲಸಿಕೆ ಪಡೆದವರಲ್ಲಿ ಅಪರೂಪವಾಗಿ ರಕ್ತ ಹೆಪ್ಪುಗಟ್ಟುವಿಕೆ ಒಳಗೊಂಡ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎನ್ನುವ ವರದಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲ ಡೋಸ್ ಪಡೆದಾಗ ಅಪಾಯವು ಅತ್ಯಧಿಕವಾಗಿರಲಿದೆ. ಆದರೆ ಅದು ಎರಡನೇ ಡೋಸ್ಗೆ ಕಡಿಮೆಯಾಗುತ್ತದೆ. ಮೂರನೇ ಡೋಸ್ಗೆ ಈ ಅಪಾಯ ಇನ್ನು ಕಡಿಮೆಯಾಗಲಿದೆ. ಒಂದು ವೇಳೆ ಅಡ್ಡ ಪರಿಣಾಮ ಸಂಭವಿಸಿದಲ್ಲಿ ಆರಂಭಿಕ ಎರಡರಿಂದ ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ ಎಂದು ಗಂಗಾಖೇಡ್ಕರ್ ತಿಳಿಸಿದರು.
ಟಿಟಿಎಸ್ ಅನ್ನು ಅಡೆನೊವೈರಸ್ ವೆಕ್ಟರ್ ಲಸಿಕೆಯ ಅಪರೂಪದ ಅಡ್ಡ ಪರಿಣಾಮವೆಂದು ಗುರುತಿಸಲಾಗಿದೆ. ಲಸಿಕೆಯ ತಿಳುವಳಿಕೆಯಲ್ಲಿ ಯಾವುದೇ ಹೊಸ ಅಥವಾ ಬದಲಾವಣೆ ಇಲ್ಲ. ಲಸಿಕೆ ಪಡೆಯುವ 10 ಲಕ್ಷ ಜನರಲ್ಲಿ ಕೇವಲ 7 ರಿಂದ 8 ಜನರಿಗೆ ಅಪಾಯವಿದೆ ಎಂದು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಲಕ್ಷಾಂತರ ಜನರ ಮೇಲೆ ಈ ಲಸಿಕೆಯ ಸಕಾರಾತ್ಮಕ ಪರಿಣಾಮವನ್ನು ಗಮನಿಸಿದರೆ, ಇದಕ್ಕೆ ಸಂಬಂಧಿತ ಅಪಾಯವು ಬಹಳ ಕಡಿಮೆಯಾಗಿದೆ ಎಂದು ಗಂಗಾಖೇಡ್ಕರ್ ಸ್ಪಷ್ಟಪಡಿಸಿದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನೆಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಲಸಿಕೆ ಪಡೆದ ಹಲವರು ಕಂಪನಿ ವಿರುದ್ಧ ಬ್ರಿಟನ್ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಸಾವು ಹಾಗೂ ಅಡ್ಡಪರಿಣಾಮದ ಆರೋಪಗಳನ್ನು ಕಂಪನಿ ವಿರುದ್ಧ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಕಂಪನಿಯು ಕೆಲವು ಅಪರೂಪದ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ಅಡ್ಡಪರಿಣಾಮದ ತೀವ್ರತೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ.