ನವದೆಹಲಿ: ಯುದ್ಧ ಪೀಡಿತ ಇಸ್ರೇಲ್ʼನಲ್ಲಿ (Israel) ಸಿಲುಕಿರುವ ಭಾರತೀಯರನ್ನು (India) ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ (Operation Ajay) ಹೆಸರಿನಲ್ಲಿ ವಿಶೇಷ ವಿಮಾನಗಳನ್ನು ಕಳಿಸಿಕೊಡಲು ಸಿದ್ಧತೆ ನಡೆಸಿದೆ. ಇಸ್ರೇಲ್ನಲ್ಲಿ 18,000 ಭಾರತೀಯರಿದ್ದಾರೆ. ಅವರನ್ನು ಕರೆತರಲು ವಿಶೇಷ ಚಾರ್ಟರ್ ಫ್ಲೈಟ್ಗಳನ್ನು ಕಳಿಸಲಾಗುವುದು. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಹಿಂದಿರುಗಲು ಮೊದಲು ನೋಂದಾಯಿಸಿದ ಭಾರತೀಯರಿಗೆ ಸೂಚನೆ ನೀಡಲಾಗಿದೆ. ನಾಳೆ ಭಾರತಕ್ಕೆ ಮೊದಲ ವಿಶೇಷ ವಿಮಾನದಲ್ಲಿ ಅವರನ್ನು ಕಳಿಸಲಾಗುವುದು. ಅಲ್ಲದೇ ನೋಂದಾಯಿತರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಇಸ್ರೇಲ್ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಇದುವರೆಗೂ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.