ಮುಂಬೈ: ಯುದ್ಧ ಪೀಡಿತ ಸುಡಾನ್ನಿಂದ ಸುಮಾರು 246 ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಮುಂಬೈಗೆ ಕರೆತರಲಾಗಿದೆ. ಸುಡಾನ್ನಿಂದ ಭಾರತೀಯರ ಎರಡನೇ ಬ್ಯಾಚ್ ಇಂದು (ಏ.27) ಮಧ್ಯಾಹ್ನ ಮುಂಬೈಗೆ ಆಗಮಿಸಿದರು.
ಮುಂಜಾನೆ ಜೆಡ್ಡಾದಿಂದ ಟೇಕ್ ಆಫ್ ಆದ ಭಾರತೀಯ ವಾಯುಪಡೆಯ ವಿಮಾನವು 246 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತಕ್ಕೆ ಕರೆತಂದಿದೆ. ಮತ್ತೊಂದು ಆಪರೇಷನ್ ಕಾವೇರಿ ಮೂಲಕ ಸೈನ್ಯದ ವಿಮಾನದಲ್ಲಿ ಭಾರತೀಯರು ಮುಂಬೈಗೆ ಬರುತ್ತಿದ್ದು, ಇನ್ನೂ 246 ಭಾರತೀಯರು ಭಾರತಕ್ಕೆ ಬರುತ್ತಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮೊದಲ ಬ್ಯಾಚ್ ನಲ್ಲಿ ನಿನ್ನೆ 360 ಭಾರತೀಯರ ನವದೆಹಲಿಗೆ ಆಗಮಿಸಿದೆ.
ಏ. 26ರಂದು ಮಿಲಿಟರಿ ವಿಮಾನ ಮತ್ತು ಯುದ್ಧನೌಕೆಯನ್ನು ಬಳಸಿಕೊಂಡು ಭಾರತ 530ಕ್ಕೂ ಹೆಚ್ಚು ನಾಗರಿಕರನ್ನು ಸುಡಾನ್ನಿಂದ ಸ್ಥಳಾಂತರಿಸಿದೆ. ಸುಡಾನ್ ಸೇನಾಪಡೆ ಮತ್ತು ಬಂಡುಕೋರ ಅರೆಸೈನಿಕ ಪಡೆಗಳ ನಡುವಿನ ಹೋರಾಟದ ನಡುವೆ ಈಶಾನ್ಯ ಆಫ್ರಿಕನ್ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದೊಯ್ಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಸುಡಾನ್ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಪ್ರತಿಸ್ಪರ್ಧಿ, ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಪಡೆಗಳು 72 ಗಂಟೆ ರಾಷ್ಟ್ರವ್ಯಾಪಿ ಕದನ ವಿರಾಮ ಒಪ್ಪಿಗೆ ನೀಡಿದ ನಂತರ ಮಂಗಳವಾರ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಯಿತು.