ಮುಂಬೈ: ಅತಿ ಹೆಚ್ಚು ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಮತ್ತು ಒಗ್ಗಟ್ಟಾಗಿದ್ದರೆ, ಬಿಜೆಪಿ ವಿರುದ್ಧ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ವಿಪಕ್ಷಗಳನ್ನು ಒಗ್ಗೂಡಿಸಿ ಬಲಿಷ್ಠ ಮೈತ್ರಿಕೂಟ ರಚಿಸಲು ಮುಂದಾಗಿರುವ ನಿತೀಶ್ ಹಲವು ರಾಜ್ಯಗಳಿಗೆ ಭೇಟಿ ನೀಡಿ ವಿಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ನಿತೀಶ್, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅತಿ ಹೆಚ್ಚು ವಿಪಕ್ಷಗಳು ಒಂದಾಗಿ ಹೋರಾಟ ನಡೆಸಿದರೆ ಉತ್ತಮ ಫಲಿತಾಂಶ ದೊರಕಲಿದೆ. ನಮ್ಮೆಲ್ಲರ ಉದ್ದೇಶವೂ ಒಂದೇ ಆಗಿದೆ. ದೇಶದ ಹಿತಕ್ಕೋಸ್ಕರ ನಾವೆಲ್ಲರೂ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯ ಸಮಯಕ್ಕೆ ವಿಪಕ್ಷಗಳ ಮೈತ್ರಿಕೂಟವನ್ನು ಬಲಿಷ್ಠಗೊಳಿಸುವುದರ ಕುರಿತಾಗಿ ಶರದ್ ಪವಾರ್ ಅವರೊಂದಿಗೂ ಮಾತುಕತೆ ನಡೆಸಿದರು.
ಈ ಮೊದಲು ಮಮತಾ ಬ್ಯಾನರ್ಜಿ(Mamta Banerjee), ಅಖಿಲೇಶ್ ಯಾದವ್ (Akhilesh Yadav), ಮಲ್ಲಿಕಾರ್ಜುನ ಖರ್ಗೆ( Mallikarjuna Kharge), ರಾಹುಲ್ ಗಾಂಧಿ (Rahul Gandhi) ಅವರೊಂದಿಗೂ ನಿತೀಶ್ ಕುಮಾರ್ (Nithish Kumar)ಮಾತುಕತೆ ನಡೆಸಿದ್ದರು. ಮುಂದಿನ ವಿಪಕ್ಷಗಳ ಸಭೆಯ ಕುರಿತಾಗಿ ಶೀಘ್ರದಲೇ ತಿಳಿಸುವುದಾಗಿಯೂ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್, ಕರ್ನಾಟಕದಲ್ಲಿ ಸದ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅದು ಮುಗಿದ ಬಳಿಕ ಅಲ್ಲಿಗೆ ತೆರಳುವುದಾಗಿ ಹೇಳಿದ್ದರು. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಭೇಟಿಯಾಗಿ ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (Devegowda), ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.