ಸಿಂಧನೂರು: ಅಧಿಕಾರಿಗಳ ವರ್ಗಾವಣೆಗಾಗಿ ಹಣ ಪಡೆದಿದ್ದೇನೆಂದು ವಿಪಕ್ಷಗಳು ಆರೋಪಿಸಿರುವುದರಲ್ಲಿ ಯಾವುದೇ ಹುರುಳಿಲ್ಲ. ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರಗಳಿಗೆ ಹಾಕಿಕೊಳ್ಳುವುದು ವಾಡಿಕೆ. ಇದನ್ನೆ ತಿರುಚುವ ಕೆಲಸ ಮಾಡಬಾರದು. ಹಣ ಪಡೆದಿದ್ದರೆ ದಾಖಲೆ ತೋರಿಸಲಿ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಕಾಕತೀಯ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿ.ವೈ.ವಿಜಯೇಂದ್ರ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ಶಾಸಕರೆ ಆರೋಪಿಸಿದ್ದರು. ಈಗ ನಾನು ಸೂಪರ್ ಸಿಎಂ ಆಗಿದ್ದೇನೆಂದು ಆರೋಪಿಸುತ್ತಿರುವುದು ಹತಾಶೆಯ ಹೇಳಿಕೆಯಾಗಿದೆ. ವಿರೋಧ ಪಕ್ಷಗಳು ಹತಾಶರಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. 5ನೇ ಗ್ಯಾರಂಟಿ ಯುವನಿಧಿ ಯೋಜನೆ ಈ ತಿಂಗಳು ಅಥವಾ ಜನವರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಅಧಿಕ ಲಾಭ ಬಂದಿದೆ ಎಂದು ಹೇಳಿದರು.