ಪಾಟ್ನಾ: ಬಿಜೆಪಿ (BJP) ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವ ಅಗತ್ಯವಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಹಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ಸೋಮವಾರ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು.
ಈ ವೇಳೆ ಅಭಿವೃದ್ಧಿ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸಿದರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ, ವಿರೋಧ ಪಕ್ಷಗಳು ಒಟ್ಟಾಗಿ ಕುಳಿತು ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ. ನಮ್ಮ ಧ್ಯೆಯ ಸ್ಪಷ್ಟವಾಗಿದ್ದರೆ, ಯಾವುದೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಬಿಹಾರದಲ್ಲಿ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದರು.
ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದ 1970ರ ದಶಕದಲ್ಲಿ ಬಿಹಾರದಿಂದ ಪ್ರಾರಂಭವಾದ ಚಳುವಳಿಯಂತೆ ರಾಜ್ಯದಲ್ಲಿ ಮತ್ತೊಂದು ಸಭೆ ನಡೆಯಬೇಕು ಎಂದು ನಿತೀಶ್ ಕುಮಾರ್ ಬಳಿ ವಿನಂತಿಸಿದ್ದೇನೆ ಎಂದು ಮಮತಾ ತಿಳಿಸಿದರು. ಪ್ರತಿಪಕ್ಷಗಳು ಒಟ್ಟಾಗಿವೆ ಎಂಬ ಸಂದೇಶವನ್ನು ದೇಶಕ್ಕೆ ತಿಳಿಸಬೇಕು. ಅದಾದ ಬಳಿಕ ನಾವು ಪ್ರಣಾಳಿಕೆ ಹಾಗೂ ಇತರ ವಿವರಗಳನ್ನು ನಿರ್ಧರಿಸುತ್ತೇವೆ. ನಾವು ದೇಶದ ಇತರ ಎಲ್ಲ ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಇಲ್ಲಿ ಯಾವುದೇ ಅಹಂಕಾರ ಹಾಗೂ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.