ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಜನ ತತ್ತರಿಸಿದ್ದಾರೆ. ಸೋಮವಾರ ದಿನವಿಡೀ ಎಡೆಬಿಡದೆ ಮಳೆ ಸುರಿದಿದ್ದು, ಮಂಗಳವಾರವೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿದರೆ, ಹಲವು ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ.
ಸಾಲು ಸಾಲು ವಿದ್ಯುತ್ ಕಂಬಗಳ ಮುರಿತದಿಂದಾಗಿ ಮಡಿಕೇರಿ ನಗರ ಸೇರಿದಂತೆ ಎಲ್ಲೆಡೆ ವಿದ್ಯುತ್ ವ್ಯತ್ಯಯದಿಂದ ಜನ ಪರದಾಡುವಂತಾಗಿದೆ.
ಅಲ್ಲಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕೂಡ ಕಂಡುಬಂದಿದ್ದು, ಸಂಪರ್ಕವೂ ಕಷ್ಟಕರವಾಗಿದೆ. ಇದಲ್ಲದೇ ಕಾವೇರಿ-ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಪುನರ್ವಸು ಮಳೆ ಅವಾಂತರ ಸೃಷ್ಟಿಸಿದ್ದು,
ಧಾರಾಕಾರ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿ ಅಂದಾಗೋವೆ ಗ್ರಾಮದ ಅಬ್ಬಾಸ್ ಎಂಬುವವರ ಮನೆಯ ಶೀಟ್ಗಳು ಮಳೆ ಗಾಳಿಗೆ ಹಾನಿಯಾಗಿದೆ. ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಅವರ ಮನೆ ಮೇಲೆ ಮರ ಬಿದ್ದು ಚಾವಣಿ ಹೆಂಚುಗಳು ಹಾಗೂ ಹಿಂಭಾಗದ ಗೂಡೆಗೆ ಪೂರ್ಣ ಹಾನಿಯಾಗಿದೆ.