ಬೆಂಗಳೂರು: ಉತ್ತರದಾಯಿತ್ವ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಾಗಿದೆ. ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಈ ಸ್ಥಾನದಲ್ಲಿ, ಈ ಹುದ್ದೆಯಲ್ಲಿ ಇರಲು ಅನರ್ಹರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು. ಇನ್ ಸೈಟ್ ಐಎಎಸ್ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಹೊಣೆಗಾರಿಕೆ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪ್ರಜಾಪ್ರಭುತ್ವ ಇರುವುದು ಜನರಿಗಾಗಿ. ಸರ್ಕಾರ ಎನ್ನುವುದು ಜನಸಾಮಾನ್ಯರ ಟ್ರಸ್ಟ್ ಇದ್ದಂತೆ ಎಂದ ಅವರು, ಬಹುಸಂಖ್ಯಾತ ಸಮುದಾಯ ಅಕ್ಷರ ಕಲಿಕೆಯಿಂದ ವಂಚಿತವಾಗಿದೆ.
ಇದಕ್ಕೆ ಸಮಾಜದಲ್ಲಿರುವ ಅಸಮಾನತೆ ಕಾರಣ. ಈ ಅಸಮಾನತೆಯನ್ನು ಅಳಿಸಲು ಸಾಧ್ಯವಾಗದಿದ್ದರೆ, ಆ ದಿಕ್ಕಿನಲ್ಲಿ ಶ್ರಮಿಸದಿದ್ದರೆ, ನಾವು ಜನಪ್ರತಿನಿಧಿಗಳಾಗಿ, ಐಎಎಸ್-ಕೆಎಎಸ್ ಅಧಿಕಾರಿಗಳಾಗಿ ಏನು ಪ್ರಯೋಜನ, ಬಡವರ ಸಂಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ನಾವು ಜನಪ್ರತಿನಿಧಿಗಳಾಗಿದ್ದೇ ಜನರ ಸೇವೆಗಾಗಿ, ಹೀಗಾಗಿ ಜನರ ಸಮಸ್ಯೆಯನ್ನು ನಿವಾರಣೆ ಮಾಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕ ಎನಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅಲ್ಲದೇ ಈ ಅಸಮಾನತೆ, ತಾರತಮ್ಯ ಅಳಿಸಲು ನಾವು ಯತ್ನಿಸದೇ ಹೋದರೆ, ಈ ದೇಶದ ಜನರೇ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಎಚ್ಚರಿಕೆಯ ಮಾತನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಸ್ಮರಿಸಿದರು. ಈ ಎಚ್ಚರಿಕೆಯ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಅಸಮಾನತೆ, ತಾರತಮ್ಯವನ್ನು ಅಳಿಸಬೇಕು. ಯುವಕರು ಈ ನಿಟ್ಟಿನಲ್ಲಿ ಸಾಗಬೇಕು ಎಂದು ಕಿವಿ ಮಾತು ಹೇಳಿದರು. ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರತ್ತೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ ಎಂದರು.