ಬೆಂಗಳೂರು: ಸತತ 2ನೇ ವರ್ಷ ಭರ್ಜರಿ ಆದಾಯ ಗಳಿಸಿದ ನಮ್ಮ ಮೆಟ್ರೋ, ಬರೋಬ್ಬರಿ 129 ಕೋಟಿ ಲಾಭದೊಂದಿಗೆ BMRCL ದಾಖಲೆ ಮಾಡಿದೆ.
ವರ್ಷದಲ್ಲಿ 23.28 ಕೋಟಿಗೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ನಿಗಮವು ಕಾರ್ಯಾಚರಣೆಗೆ 606.18 ಕೋಟಿ ವೆಚ್ಚ ಮಾಡಿದ್ದು, ಒಟ್ಟಾರೆ 735.48 ಕೋಟಿ ಆದಾಯ ಗಳಿಸಿದೆ. ಇದು ನಮ್ಮ ಮೆಟ್ರೋ ಗಳಿಸಿದ ಈವರೆಗಿನ ಅತ್ಯಧಿಕ ಆದಾಯವಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನೇರಳೆ ಮಾರ್ಗದ ವಿಸ್ತರಿತ ಕೆ.ಆರ್ ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವಿನ ಸಂಚಾರ ಪ್ರಾರಂಭ ಆಗಿರುವುದು ಮೆಟ್ರೋದ ಆದಾಯ ಹೆಚ್ಚಲು ಕಾರಣವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ನಮ್ಮ ಮೆಟ್ರೋ ಸತತ 2ನೇ ವರ್ಷ ಕಾರ್ಯಾಚರಣೆ ಮೂಲಕ ಲಾಭ ಗಳಿಸಿದೆ. ಸತತ ಎರಡನೇ ಹಣಕಾಸು ವರ್ಷದಲ್ಲಿ, ಬೆಂಗಳೂರು ಮೆಟ್ರೋ ರೈಲು ನೆಟ್ವರ್ಕ್ ಕಾರ್ಪೊರೇಷನ್ ಲಿಮಿಟೆಡ್ ಕಾರ್ಯಾಚರಣೆಯಲ್ಲಿ ಲಾಭವನ್ನು ಗಳಿಸಿದೆ. ನಮ್ಮ ಮೆಟ್ರೋದ ಒಟ್ಟಾರೆ ಸಂಚಾರಿ ಮಾರ್ಗ 73.8 ಕಿಮೀಗೆ ವಿಸ್ತರಣೆ ಆಗಿದ್ದು, ಈ ಅವಧಿಯಲ್ಲಿ ಇದು 23.28 ಕೋಟಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ನಮ್ಮ ನಿರೀಕ್ಷೆಯಂತೆ ಆದಾಯ ಹೆಚ್ಚಳವಾಗಿದೆ. ಪ್ರಯಾಣ ದರದ ಮೂಲಕ ನಮ್ಮ ಆದಾಯವು 735.48 ಕೋಟಿ ರೂ.ಗಳಷ್ಟಿದ್ದು, ವೆಚ್ಚವು 606.18 ಕೋಟಿ ರೂಪಾಯಿಗಳಷ್ಟಿದೆ ಎಂದಿದ್ದಾರೆ.