ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪೈಲೆಟ್ಲೆಸ್ ಸಂಚಾರಕ್ಕೆ ಇನ್ನೂ ಆರು ತಿಂಗಳು ಕಾಯಬೇಕಿದೆ. ಚೀನಾದಿಂದ ಬರಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ಮತ್ತೆ ತಡವಾಗುತ್ತಿದೆ. ಹಿಂದೆ ಹಳದಿ ಮಾರ್ಗವನ್ನು ಫೆಬ್ರವರಿಯಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದಿದ್ದ ಬಿಎಂಆರ್ಸಿಎಲ್ (BMRCL) ಈಗ ಜುಲೈನಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ.
ಇಲ್ಲಿ ಸಿವಿಲ್ ಕಾಮಗಾರಿ ಬಹುತೇಕ ಮುಗಿದಿದ್ದರೂ ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿಯಿಂದ 2 ಪ್ರೋಟೋ ರೈಲು ಜೊತೆ ಎಂಜಿನಿಯರ್ ಬರಬೇಕಿದೆ. ಚೀನಾದಿಂದ ಇನ್ನೂ ಅನುಮತಿ ಸಿಗದ ಕಾರಣ ಅಲ್ಲಿಂದ ಬೋಗಿಗಳು ಇನ್ನೂ ಬಂದಿಲ್ಲ. ಕೋಲ್ಕತ್ತಾದ ತೀತಾಘರ್ ವ್ಯಾಗನ್ ಕಂಪನಿಯು ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು ಇದು ಸಹ ಇನ್ನೂ ಕಾರ್ಯಚರಣೆಯಲ್ಲಿದೆ. ಚೀನಾದಿಂದ ಈ ತಿಂಗಳಾಂತ್ಯಕ್ಕೆ ಅಲ್ಲಿನ ಸಿಬ್ಬಂದಿ ಬರಲಿದ್ದಾರೆ. ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಆದರೆ ಚೀನಾದ 2 ಪ್ರೋಟೋ ಟ್ರೈನ್ ಗಳು ಭಾರತಕ್ಕೆ ಬರಲು ಮುಹೂರ್ತ ನಿಗದಿಯಾಗಿಲ್ಲ.
ಮೊದಲು ಹಡಗಿನ ಮೂಲಕ ಪ್ರೋಟೊ ಟ್ರೈನ್ ಚೆನ್ನೈ ಬಂದರನ್ನು ತಲುಪಬೇಕು. ನಂತರ ಅಲ್ಲಿಂದ ರಸ್ತೆಯ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು ತಲುಪುತ್ತವೆ. ಅತ್ತ ತೀತಾಘರ್ ವ್ಯಾಗನ್ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು. ತೀತಾಘರ್ ಉತ್ಪಾದನಾ ಘಟಕದಲ್ಲಿ ಚೀನಾ ರೈಲ್ವೈ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕೋಚ್ ನಿರ್ಮಿಸುತ್ತಿದ್ದು ಟ್ರೈನ್ ಬಂದ ಮೇಲೆ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಅನುಮೋದನೆ ಪಡೆಯಬೇಕು.
ಹಲವು ಹಂತದಲ್ಲಿ ಮೂರು ತಿಂಗಳು ಪ್ರಾಯೋಗಿಕ ಪರೀಕ್ಷೆ ಮಾಡಿದ ನಂತರ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷಿಸಿ ಅನುಮೋದನೆ ನೀಡಬೇಕು. ಈ ಹಂತಗಳು ಪೂರ್ಣವಾಗಲು ಜೂನ್-ಜುಲೈ ಆಗಬಹುದು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಣ್ ಹೇಳಿದ್ದಾರೆ.
2019 ರಲ್ಲಿ ಚೈನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೋರೆಷನ್ (ಸಿಆರ್ಆರ್ಸಿ) ಜೊತೆ ಬೋಗಿ ಖರೀದಿ ಸಂಬಂಧ ನಮ್ಮ ಮೆಟ್ರೋ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ 173 ವಾರಗಳಲ್ಲಿ 216 ಬೋಗಿ ಪೂರೈಸಬೇಕಿತ್ತು. ಕೋವಿಡ್ ಹಾಗೂ ವಿದೇಶಿ ನೇರ ಹೂಡಿಕೆ ನೀತಿ, ವ್ಯಾಪಾರ ನಿರ್ಬಂಧ, ಉಪಗುತ್ತಿಗೆ ಕಂಪನಿಯ ಹುಡುಕಾಟ ಕಾರಣ ನೀಡಿ ಸಿಆರ್ಆರ್ಸಿ ಬೋಗಿಗಳ ಪೂರೈಕೆ ವಿಳಂಬ ಮಾಡಿದೆ.
ಎಲ್ಲವೂ ನಿಗದಿ ಪ್ರಕಾರ ನಡೆದಿದ್ದರೆ 18.2 ಕಿ.ಮೀ. ಈ ಮಾರ್ಗದಲ್ಲಿ ಡಿಸೆಂಬರ್ನಲ್ಲಿ ಮೆಟ್ರೋ ಸೇವೆ ಶುರುವಾಗಬೇಕಿತ್ತು. 2021ರಿಂದ ಹಳದಿ ಮಾರ್ಗ ಕಾರ್ಯಾರಂಭ ನಿಗದಿತ ಅವಧಿ ಮುಂದೂಡಿಕೆ ಆಗುತ್ತಲೇ ಇದ್ದು, ಈಗ ಮತ್ತೊಮ್ಮೆ ಡೆಡ್ಲೈನ್ ತಪ್ಪಿದೆ.
2019ರಲ್ಲಿ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಕಂಪನಿ ಜೊತೆಗೆ ನಮ್ಮ ಮೆಟ್ರೋ 216 ಬೋಗಿಗಳ (36 ರೈಲು) ಪೂರೈಸುವ ಒಪ್ಪಂದ ನಡೆದಿತ್ತು. ಮೂಲ ಮಾದರಿಯ ಆರು ಬೋಗಿಗಳ ಎರಡು ಸೆಟ್ನ್ನು ಚೀನಾ ಕಳುಹಿಸಿದ ಬಳಿಕ ಸಿಆರ್ಆರ್ಸಿಯಿಂದ ಉಪಗುತ್ತಿಗೆ ಪಡೆದ ಕೋಲ್ಕತ್ತಾದ ಉತ್ತರಪುರ ಬಳಿಯ ತೀತಾಘರ್ ವ್ಯಾಗನ್ ಕಂಪನಿಯು 204 ಬೋಗಿಗಳನ್ನು ಅದೇ ಮಾದರಿಯಲ್ಲಿ ನಿರ್ಮಿಸಿ ಮೆಟ್ರೋಗೆ ನೀಡಬೇಕಿದೆ.