ಬೆಂಗಳೂರು: ರಾಮಜನ್ಮ ಭೂಮಿ ಹೋರಾಟದಲ್ಲಿ ರಾಜ್ಯದ ಪಾತ್ರ ದೊಡ್ಡದಿದ್ದು, ಆಂಜನೇಯನ ಜನ್ಮಭೂಮಿ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಲಬ್ರೂಹಿ ಅತಿಥಿ ಗೃಹದ ಬಳಿ ಇರುವ ಮಾರುತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಮಹತ್ವದ ಭಕ್ತಿ ಭಾವದ ದಿನ, ಐತಿಹಾಸಿಕ ದಿನ. ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ದಿನ ಎಂದರು. ರಾಮನಿಗೂ ರಾಜ್ಯಕ್ಕೂ ದೊಡ್ಡ ನಂಟಿದೆ. ಆಂಜನೇಯ ಜನ್ಮಸ್ಥಳ ಅಂಜನಾದ್ರಿ ಕರ್ನಾಟಕದಲ್ಲೇ ಇದೆ. ಆಂಜನೇಯ ಇದ್ದರೆ ರಾಮ ಪರಿಪೂರ್ಣ. ಮುಂದಿನ ನಮ್ಮ ಗುರಿ ಆಂಜನೇಯ ಜನ್ಮ ಭೂಮಿ ಅಭಿವೃದ್ಧಿ ಮಾಡುವುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಆಂಜನೇಯ ಕ್ಷೇತ್ರ ಅಭಿವೃದ್ಧಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.