ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಸಾದುದ್ದೀನ್ ಓವೈಸಿ ಸಾರಥ್ಯದ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಕನಿಷ್ಟ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಓವೈಸಿ ನಿರ್ಧರಿಸಿದ್ದು, ಜೆಡಿಎಸ್ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಎಐಎಂಐಎಂ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಒಸ್ಮಾನ್ ಘನಿ ಅವರು ಅಧಿಕೃತ ಮಾಹಿತಿ ನೀಡಿದ್ಧಾರೆ.
ಈ ಬೆಳವಣಿಗೆ ಕುರಿತಾಗಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಸುದ್ದಿ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲು ಈವರೆಗೆ ತಮ್ಮ ಪಕ್ಷದ ಮೂವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ನಾವು ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಿದ್ದೇವೆ. ಕಾದು ನೋಡುತ್ತಿದ್ದೇವೆ. ಒಂದು ವೇಳೆ ಮೈತ್ರಿ ಆಗಲಿ, ಆಗದೇ ಇರಲಿ.. ನಾವು ಚುನಾವಣೆಯಲ್ಲಿ ಸ್ಪರ್ಧಿಸೋದು ಖಚಿತ ಎಂದು ಓವೈಸಿ ಹೇಳಿದ್ದಾರೆ.
ಇನ್ನು ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಿರುವ ಎಐಎಂಐಎಂ ಪಕ್ಷ ಕರ್ನಾಟಕ ಘಟಕದ ಮುಖ್ಯಸ್ಥ ಘನಿ, ತಮ್ಮ ಪಕ್ಷದ ವತಿಯಿಂದ ಜೆಡಿಎಸ್ ಮುಖ್ಯಸ್ಥ ಎಚ್. ಡಿ. ದೇವೇಗೌಡ ಅವರಿಗೆ ಪತ್ರ ಬರೆದಿದ್ದೇವೆ, ಚುನಾವಣಾ ಪೂರ್ವ ಮೈತ್ರಿಗೆ ಆಹ್ವಾನ ಕೊಟ್ಟಿದ್ದೇವೆ. ಆದ್ರೆ, ನಮಗೆ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ತಮ್ಮ ಪಕ್ಷದ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಕನಿಷ್ಟ 25 ಕ್ಷೇತ್ರಗಳಲ್ಲಿ ಸ್ಪರ್ಧಿಸೋದು ಖಚಿತ ಎಂದು ಘನಿ ಸ್ಪಷ್ಟಪಡಿಸಿದ್ದಾರೆ.
2018ರ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಯಾವುದೇ ಅಭ್ಯರ್ಥಿಯೂ ಸ್ಪರ್ಧೆ ಮಾಡಿರಲಿಲ್ಲ. ಆದರೆ, ಜೆಡಿಎಸ್ ಪಕ್ಷಕ್ಕೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಎಐಎಂಐಎಂ ಬೆಂಬಲ ನೀಡಿತ್ತು. ಜೆಡಿಎಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿತ್ತು.
ಇನ್ನು ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್ ಪಕ್ಷ ನಿಮ್ಮ ಆಯ್ಕೆ ಆಗಬಹುದೆ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಪಕ್ಷವು ನಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಆಧಾರ ರಹಿತವಾಗಿ ಆರೋಪಗಳನ್ನು ಮಾಡುತ್ತಾರೆ. ಹೀಗಾಗಿ, ಕಾದು ನೋಡೋಣ ಎಂದಷ್ಟೇ ಓವೈಸಿ ಹೇಳಿದ್ದಾರೆ.