ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದ್ದು ಅನಂತ್ ನಾಗ್ ಅವರಿಗೆ ಹಲವರು ಶುಭ ಹಾರೈಸಿದ್ದಾರೆ.
ಅನಂತ್ ನಾಗ್ ಅವರೊಂದಿಗಿರುವ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ‘ನನ್ನ ಸ್ಪೂರ್ತಿಯಾಗಿರುವ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ದೊರೆತಿದ್ದಕ್ಕೆ ಅಭಿನಂದನೆಗಳು. ಚಿತ್ರರಂಗಕ್ಕೆ ಹಾಗೂ ನಾಟಕ ರಂಗಕ್ಕೆ ನಿಮ್ಮ ಸೇವೆ ತಲೆಮಾರುಗಳಿಗೆ ಸ್ಪೂರ್ತಿ ತುಂಬಿದೆ. ಸರಳತೆಯಲ್ಲಿ ಸಾಧಕತೆ ಅಡಗಿದೆ ಎಂದು ತೋರಿಸಿದ್ದಕ್ಕೆ ಧನ್ಯವಾದಗಳು. ಕನ್ನಡ ಚಿತ್ರರಂಗದ ರತ್ನ, ನಮ್ಮೆಲ್ಲರ ಪ್ರಿಯ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಅಪಾರ ಸಂತೋಷವಾಯಿತು. ನಿಮ್ಮ ಕಲಾ ಸಾಧನೆ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.
ಅನಂತ್ ನಾಗ್ ಅವರಿಗೆ ಒಂದೇ ರೀತಿಯ ಗಂಭೀರ ಪಾತ್ರಗಳನ್ನೇ ನಿರ್ದೇಶಕರುಗಳು ನೀಡುತ್ತಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಅನಂತ್ ನಾಗ್ ಅವರನ್ನು ಭಿನ್ನವಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪಾಠ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತ್ ನಾಗ್ ಅವರಿಗೆ ಭಿನ್ನವಾದ ಪಾತ್ರವನ್ನು ನೀಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅನಂತ್ ನಾಗ್ ಅವರನ್ನು ಭಿನ್ನ ರೀತಿಯಲ್ಲಿ ರಿಷಬ್ ಆ ಸಿನಿಮಾದಲ್ಲಿ ತೋರಿಸಿದ್ದರು.
ಒಟ್ಟು ಹತ್ತೊಂಬತ್ತು ಮಂದಿಗೆ ಪದ್ಮಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಅದರಲ್ಲಿ ಕಲಾ ವಿಭಾಗದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆಗಿದೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳ ಘೋಷಣೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿಗಳ ವಿಜೇತ ರಿಕ್ಕಿ ಕೇಜ್ ಅವರಿಗೂ ಸಹ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.