ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರಕ್ಕೆ ರಘುನಾಥ್ ನಾಯ್ಡು ಅವರಿಗೆ ನೀಡಲಾಗಿದ್ದ ಬಿ ಫಾರಂ ಅನ್ನು ದಿಢೀರನೆ ಹಿಂಪಡೆಯಲಾಗಿದೆ. ಕೆಪಿಸಿಸಿ ಕಚೇರಿಯಿಂದ ರಘುನಾಥ್ ಅವರಿಗೆ ಬಿ ಫಾರಂ ಹಿಂದಕ್ಕೆ ನೀಡುವಂತೆ ಸೂಚನೆ ಹೋಗಿದ್ದು, ತಕ್ಷಣವೇ ರಘುನಾಥ್ ಅವರು ತಮಗೆ ನೀಡಲಾಗಿದ್ದ ಬಿ ಫಾರಂ ಅನ್ನು ಕೆಪಿಸಿಸಿ ಕಚೇರಿಗೆ ತಂದುಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪದ್ಮನಾಭ ನಗರದಲ್ಲಿ ಬಿಜೆಪಿ ನಾಯಕ, ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರನ್ನು ಅತ್ತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಕಣಕ್ಕಿಳಿಸಲಾಗಿದೆ. ಆ ಕ್ಷೇತ್ರದ ಮೇಲೆ ಹಿಡಿತವಿರುವ ಶಿವಕುಮಾರ್ ಅವರಿಂದ ಈ ಬಾರಿ ಕ್ಷೇತ್ರವನ್ನು ಕಸಿದುಕೊಳ್ಳಲು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಅವರ ಮೇಲೆ ಮಾನಸಿಕ ಒತ್ತಡ ಹೇರಿ ಅವರನ್ನು ಅದೇ ಕ್ಷೇತ್ರದಲ್ಲಿ ಕಟ್ಟಿ ಹಾಕಲೆಂದೇ ಅಶೋಕ್ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಇದರ ವಿರುದ್ಧ ಪ್ರತಿ ಅಸ್ತ್ರ ಹೂಡಿರುವ ಶಿವಕುಮಾರ್, ಕನಕಪುರದಲ್ಲಿ ತಮ್ಮನ್ನು ಕಟ್ಟಿ ಹಾಕಲು ಯತ್ನಿಸಿರುವ ಬಿಜೆಪಿಯ ಮಂತ್ರವನ್ನು ಆ ಪಕ್ಷಕ್ಕೆ ತಿರುಗಿಸಲು ನಿರ್ಧರಿಸಿದ್ದಾರೆ.
ಅದಕ್ಕಾಗಿ ರಾಮನಗರದ ಸಂಸದರಾಗಿರುವ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಪದ್ಮನಾಭ ನಗರದಲ್ಲಿ ಎದುರಾಳಿಯಾಗಿಸಲು ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ಹೆಣೆದಿದ್ದು, ಆ ಕಾರಣದಿಂದಲೇ ರಘುನಾಥ್ ನಾಯ್ಡು ಅವರಿಗೆ ನೀಡಲಾಗಿದ್ದ ಬಿ ಫಾರಂ ಅನ್ನು ಹಿಂಪಡೆಯಲಾಗಿದೆ ಎಂದು ಅವರು ಹೇಳಲಾಗಿದೆ.
ಈ ತಂತ್ರಗಾರಿಕೆ ನಿಜಕ್ಕೂ ಅನುಷ್ಠಾನಕ್ಕೆ ಬಂದರೆ ಅಶೋಕ್ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದು ಬಲು ಕಷ್ಟಕರವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ. ಏಕೆಂದರೆ, ಅಶೋಕ್ ಅವರಿಗೆ ಪದ್ಮನಾಭ ನಗರ ಅವರ ಸ್ವಂತ ಕ್ಷೇತ್ರ. ಅಲ್ಲಿ ಅವರಿಗೆ ಹತೋಟಿಯಿದೆ. ಆದರೆ, ಅವರಿಗೆ ಕನಕಪುರದಲ್ಲಿ ಅದರಲ್ಲೂ ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನಿಲ್ಲುವಂತೆ ಪಕ್ಷ ಮಾಡಿರುವುದರಿಂದ ಅಲ್ಲಿಯೂ ಅವರು ತಮ್ಮ ಪ್ರಚಾರವನ್ನು ನೋಡಿಕೊಳ್ಳಬೇಕಿದೆ, ಮತಯಾಚನೆಗೆ ಮನೆಮನೆಗೆ ಹೋಗಬೇಕಿದೆ.