ಇಸ್ಲಾಮಾಬಾದ್: ದ್ವಿಪಕ್ಷೀಯ ರಕ್ಷಣಾ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಚೀನಾಕ್ಕೆ ತೆರಳಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ಪಾಕಿಸ್ತಾನ ಸೇನೆಯ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ನಾಲ್ಕನೇ ವಿದೇಶಿ ಭೇಟಿಯಾಗಿದೆ. ಜನವರಿಯಲ್ಲಿ ಮುನೀರ್ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮೊದಲ ಅಧಿಕೃತ ಭೇಟಿ ನೀಡಿದರು.
ಒಂದು ತಿಂಗಳ ನಂತರ ಬ್ರಿಟನ್ನ ರಕ್ಷಣಾ ಸಚಿವಾಲಯದ ಆಹ್ವಾನದ ಮೇರೆಗೆ ಭದ್ರತೆಗೆ ಸಂಬಂಧಿಸಿದ ಕಾರ್ಯತಂತ್ರದ ಸಮಸ್ಯೆಗಳನ್ನು ಚರ್ಚಿಸಲು ಇಂಗ್ಲೆಂಡ್ ಗೆ ಭೇಟಿ ನೀಡಿದರು. ನಂತರ ಮತ್ತೆ ಯುಎಇಗೆ ಭೇಟಿ ನೀಡಿದರು. ಇದೀಗ ನಾಲ್ಕನೇ ಭಾರಿ ಚೀನಾಗೆ ಭೇಟಿ ನೀಡುತ್ತಿದ್ದಾರೆ.
ದ್ವಿಪಕ್ಷೀಯ ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಚೀನಾಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿ ನೀಡಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೆಚ್ಚಿನ ವಿವರಗಳನ್ನು ನೀಡದೆ ಹೇಳಿಕೆ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥರು ನೇಮಕಗೊಂಡ ವಾರದಲ್ಲೇ ಚೀನಾಕ್ಕೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಈ ಬಾರಿ ವಿಳಂಬವಾಗಲು ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಕಾರಣ ಎನ್ನಲಾಗಿದೆ.
ಬಾಹ್ಯ ಪಾವತಿ ಹಣಕಾಸಿನ ಅಂತರವನ್ನು ಕಡಿಮೆ ಮಾಡಲು ಕನಿಷ್ಠ 6 ಶತಕೋಟಿ ಡಾಲರ್ ವ್ಯವಸ್ಥೆಗೊಳಿಸುವಂತೆ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಹಣಕಾಸು ನಿ ಒತ್ತಡದ ಹೇರುತ್ತಿರುವ ನಡುವೆ ಈ ಭೇಟಿಯಿಂದ ಕೆಲ ಪರಿಣಾಮಗಳನ್ನು ನಿರೀಕ್ಷಿಸಲಾಗಿದೆ.