ನೆರೆಯ ಪಾಕಿಸ್ತಾನವು ಪದೇ ಪದೇ ನಾಚಿಕೆಗೇಡಿಕ ಕೆಲಸವನ್ನು ಮಾಡುವ ಮೂಲಕ ಇತರ ದೇಶಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇದೀಗ ತನ್ನ ದೇಶಕ್ಕಾಗಿ ಪ್ರಾಣ ಕೊಟ್ಟ ಸೈನಿಕರ ಮೃತದೇಹವನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ಮೂಲಕ ಮತ್ತೆ ಟೀಕೆಗೆ ಗುರಿಯಾಗಿದೆ.
ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಯೋಧರಿಗೆ ಗೌರವಯುತ ಬೀಳ್ಕೊಡುಗೆ ನೀಡುವುದು ಸಾಮಾನ್ಯ. ಆದರೆ ಪಾಕಿಸ್ತಾನ ಸರ್ಕಾರಕ್ಕೆ ಮಾತ್ರ ಮೃತದೇಹಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಆಡಳಿತವು ಖೈಬರ್ ಪಖ್ತುಂಖ್ವಾದಲ್ಲಿ ಸೈನಿಕರ ದೇಹಗಳನ್ನು ಕತ್ತೆಗಳ ಮೇಲೆ ಸಾಗಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಈ ಸೈನಿಕರು ಸಾವನ್ನಪ್ಪಿದ್ದು ಪಾಕಿಸ್ತಾನಿ ಸೇನೆಯು ಈ ಎಲ್ಲಾ ಅಂಕಿಅಂಶಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಈ ಬಾರಿಯೂ ಪಾಕಿಸ್ತಾನಿ ಸೇನೆ ಅದನ್ನೆ ಮಾಡಲು ಮುಂದಾಗಿತ್ತು. ಆದರೆ ವಿಡಿಯೋ ವೈರಲ್ ನಿಂದಾಗಿ ವಿಷಯ ಜಗಜ್ಜಾಹಿರಾಗಿದೆ.
ಭಯೋತ್ಪಾದಕರು ಪಾಕಿಸ್ತಾನ ಸೇನೆಯ 2 ಡಜನ್ಗಿಂತಲೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದ್ದರು. ಪೊಲೀಸ್ ಠಾಣೆಗೆ ನುಗ್ಗಿ 7 ಪೊಲೀಸರನ್ನು ಅಪಹರಿಸಿದ್ದರು. ಈ ದಾಳಿಯಲ್ಲಿ ಸೈನಿಕರ ಸಾವನ್ನು ಮರೆಮಾಡಲು, ಪಾಕಿಸ್ತಾನಿ ಆಡಳಿತವು ಮೃತ ಸೈನಿಕರ ಶವಗಳನ್ನು ಘಟನೆಯ ಸ್ಥಳದಿಂದ ಆದಷ್ಟು ಬೇಗ ತೆರವುಗೊಳಿಸಲು ಪ್ರಯತ್ನಿಸಿತು. ತರಾತುರಿಯಲ್ಲಿ, ಆಡಳಿತವು ಸೈನಿಕರ ಮೃತ ದೇಹಗಳನ್ನು ಕತ್ತೆಗಳ ಮೇಲೆ ಹೇರಿ ಕಾಡಿನ ಮೂಲಕ ಸಾಗಿಸಲು ಪ್ರಾರಂಭಿಸಿತು. ಆದರೆ ಪಾಕ್ ಆಡಳಿತದ ಈ ಕೃತ್ಯ ಮತ್ತೊಂದು ಸೇನಾ ತುಕಡಿಯ ಕೈಗೆ ಸಿಕ್ಕಿಬಿದ್ದಿದ್ದು, ಸೈನಿಕರು ಇದನ್ನು ವಿಡಿಯೋ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ನಡುವೆ ವಾಗ್ವಾದವೂ ನಡೆದಿತ್ತು.
ಕತ್ತೆಗಳ ಮೇಲೆ ಯೋಧರ ಮೃತದೇಹಗಳನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನದ ಫೆಡರಲ್ ಅಪೆಕ್ಸ್ ಸಮಿತಿಯು ಬಲೂಚಿಸ್ತಾನದ ಎಲ್ಲಾ ಸಕ್ರಿಯ ಭಯೋತ್ಪಾದಕ ಗುಂಪುಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.