ಭಾರತದ ವಿರುದ್ಧದ ವಿಶ್ವಕಪ್ (World Cup) ಕ್ರಿಕೆಟ್ನಲ್ಲಿ ಪಾಕಿಸ್ತಾನ (Pakistan) ತಂಡವನ್ನು ಗುರಿಯಾಗಿಸಿ ತೋರಿದ ಅನುಚಿತ ವರ್ತನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಐಸಿಸಿಗೆ (ICC) ದೂರು ನೀಡಿದೆ.
ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ಪಾಕಿಸ್ತಾನದ ಅಭಿಮಾನಿಗಳಿಗೆ ವೀಸಾ ನೀಡದೇ ಇರುವುದನ್ನು ಉಲ್ಲೇಖಿಸಿ ದೂರು ದಾಖಲಿಸಿದೆ. ಪಿಸಿಬಿ ಸ್ಪಷ್ಟವಾಗಿ ಅನುಚಿತ ವರ್ತನೆ ಏನು ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ.
ಭಾರತದ ಜೊತೆ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಗೆ ಆಗಮಿಸಿದ ಪಾಕ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ವಿಶ್ವಕಪ್ ಕ್ರಿಕೆಟ್ ಐಸಿಸಿ ಆಯೋಜನೆ ಮಾಡುತ್ತಿರುವ ಟೂರ್ನಿಯಂತೆ ಕಾಣುತ್ತಿಲ್ಲ. ಇದು ಬಿಸಿಸಿಐ ಆಯೋಜನೆ ಮಾಡುತ್ತಿರುವ ಟೂರ್ನಿಯಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಾಕ್ ಪಂದ್ಯದಲ್ಲಿ ಆಗಿದ್ದೇನು?
ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳು ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರಿಗೆ ಸ್ಲೆಡ್ಜಿಂಗ್ ಮಾಡಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು.
ಅಭಿಮಾನಿಗಳ ಸಿಟ್ಟಾಗಿದ್ದು ಯಾಕೆ?
ರಿಜ್ವಾನ್ ಅವರ ವಿರುದ್ಧ ಟೀಂ ಇಂಡಿಯಾ (Team India) ಅಭಿಮಾನಿಗಳು ಮುಗಿಬೀಳಲು ಕಾರಣವಿದೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ಗಳ ಭರ್ಜರಿ ಜಯಗಳಿಸಿತ್ತು. ಭಾರತದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ್ದರು.
ಮೈದಾನದಲ್ಲಿ ನಮಾಜ್ ಮಾಡಿದ್ದಕ್ಕೆ ಅಂದೇ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಈ ಪಂದ್ಯದ ನಂತರ ಪಾಕ್ ಮಾಜಿ ಆಟಗಾರ ವಾಕರ್ ಯೂನಿಸ್ (Waqar Younis) ನೀಡಿದ ಹೇಳಿಕೆ ಸುಂಟರಗಾಳಿ ಎಬ್ಬಿಸಿತ್ತು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕ್ ಗೆಲ್ಲುವುದರ ಜೊತೆಗೆ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು ಎಂದು ಹೇಳಿದ್ದರು.
ಇಂಡೋ ಪಾಕ್ ಕ್ರಿಕೆಟ್ ಕದನ ನಡೆಯುವ ಮೊದಲು ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಈ ಹೇಳಿಕೆಗೆ ಪೂರಕವಾಗಿ ಪಾಕ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಮೋದಿ ಸ್ಟೇಡಿಯಂನಲ್ಲಿ ಭಾರತ ಸೋಲಬೇಕು ಮತ್ತು ಹಿಂದೂಗಳ ಮುಂದೆ ರಿಜ್ವಾನ್ ನಮಾಜ್ ಮಾಡುವುದನ್ನು ನೋಡಬೇಕು ಎಂದು ಕಮೆಂಟ್ ಮಾಡುತ್ತಿದ್ದರು. ಪಾಕ್ ಅಭಿಮಾನಿಗಳ ಆಸೆಯಂತೆ ರಿಜ್ವಾನ್ ಅವರು ವಿಶ್ವಕಪ್ ಕ್ರಿಕೆಟ್ನಲ್ಲಿ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲೇ ನಮಾಜ್ ಮಾಡಿದ್ದರು